ಸುಬ್ರಹ್ಮಣ್ಯ : ಧಾರಾಕಾರ ಮಳೆ; ಕುಕ್ಕೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ, ಭಕ್ತರಿಗೆ ಪರ್ಯಾಯ ಸ್ನಾನ ವ್ಯವಸ್ಥೆ...

ಸುಬ್ರಹ್ಮಣ್ಯ : ಧಾರಾಕಾರ ಮಳೆ; ಕುಕ್ಕೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ, ಭಕ್ತರಿಗೆ ಪರ್ಯಾಯ ಸ್ನಾನ ವ್ಯವಸ್ಥೆ...

ಕುಕ್ಕೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ

ಸುಬ್ರಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾಗೂ ಘಾಟಿ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಕುಮಾರಧಾರಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಪವಿತ್ರ ಸ್ನಾನಘಟ್ಟ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಸುರಕ್ಷತಾ ದೃಷ್ಟಿಯಿಂದ ಭಕ್ತರನ್ನು ನದಿಯತ್ತ ತೆರಳದಂತೆ ದೇವಸ್ಥಾನ ಆಡಳಿತ ಹಾಗೂ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

ಸ್ನಾನಘಟ್ಟ ಬಳಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಪರ್ಯಾಯ ವ್ಯವಸ್ಥೆಯಾಗಿ ದೊಡ್ಡ ಡ್ರಮ್‌ಗಳಲ್ಲಿ ನೀರು ತುಂಬಿಸಿ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಿತ್ಯ ಸಾವಿರಾರು ಭಕ್ತರು ಯಾವುದೇ ತೊಂದರೆಯಾಗದಂತೆ ದೇವರ ದರ್ಶನ ಪಡೆಯುತ್ತಿದ್ದಾರೆ.

Dakshina Kannada  Kukke Kumardhara snana Ghatt  ಕುಕ್ಕೆ ಕುಮಾರಧಾರಾ ಸ್ನಾನಘಟ್ಟ  Rain
ನದಿಯಲ್ಲಿ ನೀರಿನ ಹರಿವು ತೀವ್ರವಾಗಿರುವುದರಿಂದ ಪೊಲೀಸರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ, ಭಕ್ತರು ನದಿಗೆ ಇಳಿಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ನದಿಯ ನೀರಿನ ಮಟ್ಟದ ಮೇಲೆ ಆಡಳಿತ ನಿರಂತರ ನಿಗಾ ಇರಿಸಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಪರ್ಯಾಯ ಸ್ನಾನ ವ್ಯವಸ್ಥೆ ಮುಂದುವರಿಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಜನಜೀವನ ಅಸ್ತವ್ಯಸ್ತ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ನದಿಗಳು, ಹೊಳೆಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿರುವ ಘಟನೆಗಳು ವರದಿಯಾಗಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

Dakshina Kannada  Kukke Kumardhara snana Ghatt  ಕುಕ್ಕೆ ಕುಮಾರಧಾರಾ ಸ್ನಾನಘಟ್ಟ  Rain

ಕುಮಾರಧಾರಾ, ನೇತ್ರಾವತಿ, ಗುಂಡ್ಯ ಹೊಳೆ, ಪಯಸ್ವಿನಿ ನದಿಗಳು ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಿಲ್ಲಾಡಳಿತವು ನದಿ ತೀರದ ನಿವಾಸಿಗಳು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು, ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ.

ಕಡಬದ ಕುಂತೂರು ಎಂಬಲ್ಲಿ ಅಡಿಕೆ ಮರ ಬಿದ್ದು ವೃದ್ಧ ಮೃತಪಟ್ಟರೆ ಬಲ್ಪ ಎಂಬಲ್ಲಿ ಮನೆ ಮೇಲೆ ಮರ ಬಿದ್ದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೀನುಗಾರರು ಮತ್ತು ಪ್ರವಾಸಿಗರು ಜಲಾಶಯ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ನೀರಿನ ಮಟ್ಟ ಈ ವರ್ಷದ ಇದೇ ಮೊದಲ ಬಾರಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಧರ್ಮಸ್ಥಳ, ಉಪ್ಪಿನಂಗಡಿ (ನೇತ್ರಾವತಿ – ಕುಮಾರಧಾರಾ ಸಂಗಮ) ವಷ್ಟೇ ಅಲ್ಲ, ಬಂಟ್ವಾಳದಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ಪಶ್ಚಿಮ ಘಟ್ಟ ಪ್ರದೇಶ ಹಾಗೂ ನದಿಯ ಉಗಮಸ್ಥಾನದಲ್ಲಿ ಮಳೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಬಂಟ್ವಾಳದ ಕಂಚಿಕಾರಪೇಟೆಯಲ್ಲಿರುವ ನೇತ್ರಾವತಿ ನದಿ ನೀರಿನ ಮಾಪನದಲ್ಲಿ ಶನಿವಾರ ಏರಿಕೆ ಕಂಡಿದೆ. ನದಿಯ ಮಟ್ಟ ಶನಿವಾರ (ಆಗಸ್ಟ್ 1) 5.6 ಮೀಟರ್ ಇತ್ತು. ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಈ ವರ್ಷದಲ್ಲಿ ಮೊದಲ ಬಾರಿ ಈ ಮಟ್ಟವನ್ನು ತಲುಪಿರುವುದು ಗಮನಾರ್ಹ.

ಇದುವರೆಗೂ ನಾಲ್ಕು, ಐದು ಮೀಟರ್ ಒಳಗೆ ಹರಿಯುತ್ತಿದ್ದ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿರುವುದು ಕೃಷಿಕರಲ್ಲಿ ಸಂತಸ ಮೂಡಿಸಿದೆ.


Ads on article

Advertise in articles 1

advertising articles 2

Advertise under the article