ಮಂಗಳೂರು: ಕೋರ್ಟ್ ಕ್ರಾಸ್ ರಸ್ತೆಯಲ್ಲಿ ಸರಣಿ ಅಪಘಾತ: 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ; ಆಟೋ ಚಾಲಕ ಸಾವು, ಇಬ್ಬರಿಗೆ ಗಾಯ.
ಘಟನೆಯಲ್ಲಿ ನ್ಯಾಯಾಧೀಶರು ಹಾಗೂ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಾಸರಗೋಡು ಮೊಗ್ರಾಲಿನ ಪುತ್ತೋರಿ ಪೆರಾಲ್ ಲಕ್ಷ್ಮೀ ನಿಲಯದ ನಿವಾಸಿ, ಕೊರಗಪ್ಪ ಎಂಬವರ ಪುತ್ರ ಚಂದ್ರ ಕೆ. (67) ಮೃತಪಟ್ಟ ಗೂಡ್ಸ್ ಆಟೋ ಚಾಲಕ.
ಘಟನೆಯ ವಿವರ: ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿನಯ್ ಡಿ. (47) ಅವರು ಮಂಗಳವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ತಮ್ಮ ಹ್ಯಾಟ್‌ಹಿಲ್ ಜಡ್ಜಸ್ ಕ್ವಾರ್ಟರ್ಸ್‌ನಿಂದ ಕಾರಿನಲ್ಲಿ ಕರ್ತವ್ಯ ನಿಮಿತ್ತ ನ್ಯಾಯಾಲಯದ ಸಂಕೀರ್ಣಕ್ಕೆ ತೆರಳುತ್ತಿದ್ದರು.
ಕಾರು ರಾಧಾ ಮೆಡಿಕಲ್ಸ್ ಎದುರಿನ ತಿರುವಿನಲ್ಲಿ ಸಾಗುತ್ತಿದ್ದ ವೇಳೆ, ನ್ಯಾಯಾಲಯದ ಕಡೆಯಿಂದ ಕೆಳಮುಖವಾಗಿ ಇಳಿಜಾರು ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಗೂಡ್ಸ್ ಆಟೋರಿಕ್ಷಾ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ನುಗ್ಗಿ ನೇರವಾಗಿ ನ್ಯಾಯಾಧೀಶರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಗೂಡ್ಸ್ ಆಟೋರಿಕ್ಷಾ ರಸ್ತೆಯಲ್ಲೇ ಪಲ್ಟಿಯಾಗಿ, ಹಿಂಬದಿಯಿಂದ ಬರುತ್ತಿದ್ದ ಹೋಂಡಾ ಆಕ್ಟಿವಾ ಸ್ಕೂಟರ್‌ಗೂ ಅಪ್ಪಳಿಸಿದೆ.
ಚಿಕಿತ್ಸೆ ಫಲಿಸದೆ ಚಾಲಕ ಸಾವು: ಅಪಘಾತದ ತೀವ್ರತೆಗೆ ಗೂಡ್ಸ್ ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಚಂದ್ರ ಕೆ. ಅವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ದೃಢಪಡಿಸಿದ್ದಾರೆ.
ಅಪಘಾತದಲ್ಲಿ ಕಾರಿನಲ್ಲಿದ್ದ ನ್ಯಾಯಾಧೀಶ ವಿನಯ್ ಡಿ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಕೂಟರ್ ಸವಾರ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಕ್ಕೀಡಾದ ಮೂರೂ ವಾಹನಗಳು ಭಾಗಶಃ ನಜ್ಜುಗುಜ್ಜಾಗಿವೆ.
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಕದ್ರಿ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2026 ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(a), 125(b) ಹಾಗೂ ಮೋಟಾರು ವಾಹನ ಕಾಯ್ದೆಯಡಿ (IMV Act) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.