ಗುಜರಾತ್ :ವಿಮಾನ ದುರಂತದಲ್ಲಿ ಮಗ - ಸೊಸೆ ಮೃತ: ಮದುವೆಯ ಅರ್ಧ ಸುಟ್ಟ ಆಲ್ಬಂ ಹಿಂತಿರುಗಿಸಿದ ಏರ್ ಇಂಡಿಯಾ; ಪೋಷಕರಲ್ಲಿ ಮತ್ತೆ ಮಡುಗಟ್ಟಿದ ದುಃಖ!!!

ಗುಜರಾತ್ :ವಿಮಾನ ದುರಂತದಲ್ಲಿ ಮಗ - ಸೊಸೆ ಮೃತ: ಮದುವೆಯ ಅರ್ಧ ಸುಟ್ಟ ಆಲ್ಬಂ ಹಿಂತಿರುಗಿಸಿದ ಏರ್ ಇಂಡಿಯಾ; ಪೋಷಕರಲ್ಲಿ ಮತ್ತೆ ಮಡುಗಟ್ಟಿದ ದುಃಖ!!!

ಗುಜರಾತ್: ಅಹಮದಾಬಾದ್‌ನಲ್ಲಿ ಎಂಟು ತಿಂಗಳ ಹಿಂದೆ ನಡೆದ ಏರ್ ಇಂಡಿಯಾ ವಿಮಾನ ದುರಂತದ ನೋವು ಇನ್ನೂ ಮಾಸಿಲ್ಲ. ಈ ನಡುವೆ ಅಪಘಾತದಲ್ಲಿ ಮೃತ ನವವಿವಾಹಿತ ಮಗ, ಸೊಸೆಗೆ ಸೇರಿದ ಸುಟ್ಟ ವಸ್ತುಗಳನ್ನು ಕುಟುಂಬಸ್ಥರಿಗೆ ವಿಮಾನಯಾನ ಸಂಸ್ಥೆ ನೀಡಿದೆ.

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಸವ್ದನ್‌ಭಾಯ್ ಚೌಧರಿ ಅವರ ನವವಿವಾಹಿತ ಮಗ ಕಮಲೇಶ್ ಚೌಧರಿ ಮತ್ತು ಸೊಸೆ ಧಾಪುಬೆನ್ ಅವರು ಅಹಮದಾಬಾದ್ ವಿಮಾನ ದುರಂತದಲ್ಲಿ ಅಸುನೀಗಿದ್ದರು. ಆದರೆ ನವ ದಂಪತಿಗಳ ಮದುವೆ ಆಲ್ಬಂ ಮತ್ತು ಗುರುತಿಸ ಚೀಟಿ ಸೇರಿ ಕೆಲ ವಸ್ತುಗಳು ಅಪಘಾತದಲ್ಲಿ ಅರ್ಧ ಸುಟ್ಟಿದ್ದು, ಇದೀಗ ಇವುಗಳನ್ನು ಕುಟುಂಬಸ್ಥರಿಗೆ ಮರಳಿಸಲಾಗಿದೆ. ಪುತ್ರನ ವಸ್ತುಗಳನ್ನು ನೋಡಿ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.

ಮೃತರ ವಸ್ತುಗಳು ಪೋಷಕರಿಗೆ ಹಸ್ತಾಂತರ ಪ್ರಕ್ರಿಯೆ: ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ 12, 2025 ರಂದು ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ಹಾರಿದ ಸ್ವಲ್ಪ ಸಮಯದ ನಂತರ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 229 ಪ್ರಯಾಣಿಕರು, 12 ಸಿಬ್ಬಂದಿ ಮತ್ತು ಕಟ್ಟಡದಲ್ಲಿದ್ದ 19 ಜನರು ಸೇರಿದಂತೆ 260 ಜನರು ಮೃತಪಟ್ಟಿದ್ದರು. ವಿಮಾನದ ಅವಶೇಷಗಳಲ್ಲಿ ಸಿಕ್ಕ ಮೃತರ ವಸ್ತುಗಳನ್ನು ಇತ್ತೀಚೆಗೆ ಅವರ ಕುಟುಂಬಸ್ಥರಿಗೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.


ಪೋಷಕರ ಕಣ್ಣೀರು: ಆರು ತಿಂಗಳ ಹಿಂದೆಯಷ್ಟೇ ಮದುವೆಯಾದ ಕಮಲೇಶ್ ಮತ್ತು ಧಾಪುಬೆನ್ ಕೂಡ ಲಂಡನ್‌ನಲ್ಲಿ ಹೊಸ ಜೀವನ ಕಟ್ಟಿಕೊಳ್ಳಲು ಕನಸು ಹೊತ್ತು ಅಂದು ವಿಮಾನ ಏರಿದ್ದರು. ಆದರೆ ದುರಂತದಲ್ಲಿ ಜೀವನವೇ ಅಂತ್ಯವಾಯಿತು. ಇದು ಅವರ ಅಂತಿಮ ವಿದಾಯ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ದುರಂತದ ದಿನ ಬೆಳಗ್ಗೆ ದಂಪತಿಗಳನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಬಂದಿದ್ದ ಮೃತನ ತಂದೆ ಸವ್ದನ್‌ಭಾಯ್ ಹೇಳುತ್ತಾರೆ.

"ನನ್ನ ಸೊಸೆ ಧಾಪುಬೆನ್ ಎಂದಿಗೂ ವಿಮಾನದಲ್ಲಿ ಪ್ರಯಾಣಿಸದ ಕಾರಣ ಭಯಭೀತರಾಗಿದ್ದರು. ಆದರೆ ದಂಪತಿಗಳು ತಮ್ಮ ಜೀವನ ಕಟ್ಟಿಕೊಳ್ಳುವ ಪ್ಲಾನ್​ ಮಾಡಿಕೊಂಡಿದ್ದರಿಂದ ಖುಷಿಯಲ್ಲಿ ಹೊರಟಿದ್ದರು" ಎಂದು ಸವ್ದನ್‌ಭಾಯ್ ಕಣ್ಣೀರು ಹಾಕಿದರು.


ಅವರನ್ನು ಡ್ರಾಪ್ ಮಾಡಿ ನಾವು ಮನೆಗೆ ಹಿಂದಿರುಗುವಾಗ, ಯುಕೆಯಲ್ಲಿದ್ದ ಪುತ್ರನ ಸ್ನೇಹಿತ ಕರೆ ಮಾಡಿ ಅವರ ಟಿಕೆಟ್ ಸಂಖ್ಯೆಗಳನ್ನು ಕೇಳಿದರು. ಆಗ ಕಳವಳಗೊಂಡು ಏಕೆ ಎಂದು ಕೇಳಿದೆವು, ಆದರೆ ಅವರು ಏನನ್ನೂ ಹೇಳಲಿಲ್ಲ. ನಾವು ನಮ್ಮ ಫೋನ್‌ಗಳನ್ನು ಪರಿಶೀಲಿಸಿದಾಗ ವಿಮಾನ ಅಪಘಾತಕ್ಕೀಡಾಗಿದ್ದು ಗೊತ್ತಾಗಿತ್ತು" ಎಂದು ಸವ್ದನ್‌ಭಾಯ್ ನೆನಪಿಸಿಕೊಳ್ಳುತ್ತಾರೆ.

ಅಪಘಾತದಲ್ಲಿ ದೇಹಗಳು ಸುಟ್ಟು ಹೋಗಿದ್ದರಿಂದ ಕಮಲೇಶ್ ಮತ್ತು ಧಾಪುಬೆನ್ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆದರೆ ಅಪಘಾತ ಸ್ಥಳದಲ್ಲಿ ಕಂಡುಬಂದ ಮದುವೆಯ ಆಲ್ಬಂ ಸೇರಿದಂತೆ ಕೆಲವು ಅರ್ಧ ಸುಟ್ಟ ವಸ್ತುಗಳಿಂದ ಅವರ ಸಾವು ಖಚಿತವಾಯಿತು.

"ಅವರು ಮೃತಪಟ್ಟಿದ್ದಾರೆ ಎಂದು ನಂಬಲು ವೈಯಕ್ತಿಕ ವಸ್ತುಗಳು ನಮಗೆ ಸಹಾಯ ಮಾಡಿದವು. ಈಗ, ಎಂಟು ತಿಂಗಳ ನಂತರ, ಅದೇ ವಸ್ತುಗಳು ವಾಪಸ್ ಬಂದಿರುವುದು ನಮ್ಮಹಳೆಯ ನೋವವನ್ನು ಮತ್ತಷ್ಟು ಹೆಚ್ಚಿಸಿವೆ" ಎಂದು ಸವ್ದನ್‌ಭಾಯ್ ಹೇಳುತ್ತಾರೆ.

ಅವರ ಬಗ್ಗೆ ಯೋಚಿಸಿದಾಗ ಈಗಲೂ ನಿದ್ರೆ ಬರುವುದಿಲ್ಲ: "ಈಗಲೂ ನಾನು ಅವರ ಬಗ್ಗೆ ಯೋಚಿಸಿದಾಗ ನಿದ್ರೆ ಬರುವುದಿಲ್ಲ. ಪ್ರತಿದಿನ ಬೆಳಿಗ್ಗೆ ಎದ್ದಾಗ ನನ್ನ ಮುಂದೆ ನನ್ನ ಮಗ ಇದ್ದಾನೆಂಬ ಭಾವನೆ ಬರುತ್ತದೆ. ಜೂನ್ 12ರ ಘಟನೆ ನೆನಪಿಸಿಕೊಂಡರೆ ಇಂದಿಗೂ ನನ್ನ ಹೃದಯ ನಡುಗುತ್ತದೆ" ಅಂತಾರೆ ಮೃತ ಕಮಲೇಶ್ ತಂದೆ.

ಮಗ ಮತ್ತು ಸೊಸೆಯ ಆಧಾರ್ ಮತ್ತು ವೋಟರ್ ಐಡಿ ಸೇರಿದಂತೆ ಭಾಗಶಃ ಸುಟ್ಟ ಐ-ಕಾರ್ಡ್‌ಗಳು ಮತ್ತು ಮದುವೆ ಆಲ್ಬಂ ನೋಡಿ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.


Ads on article

Advertise in articles 1

advertising articles 2

Advertise under the article