ಕೇರಳ :ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವದಾನ ಮಾಡಿದ 10 ತಿಂಗಳ ಕಂದ ; ಸಾವಿನಲ್ಲೂ ಸಾರ್ಥಕತೆ ಮೆರೆದ ಕೇರಳದ ಅತೀ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್ !

ಕೇರಳ :ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವದಾನ ಮಾಡಿದ 10 ತಿಂಗಳ ಕಂದ ; ಸಾವಿನಲ್ಲೂ ಸಾರ್ಥಕತೆ ಮೆರೆದ ಕೇರಳದ ಅತೀ ಕಿರಿಯ ಅಂಗಾಂಗ ದಾನಿ ಅಲಿನ್ ಶೆರಿನ್ !

ತಿರುವನಂತಪುರಂ: ಕೇರಳದಲ್ಲಿ ಅಪರೂಪದ ಘಟನೆ ನಡೆದಿದ್ದು, ಇದು ದೇಶದ ಗಮನ ಸೆಳೆದಿದೆ. ತಮ್ಮ ಏಕೈಕ ಪುತ್ರಿಯನ್ನ ಅಪಘಾತದಲ್ಲಿ ಕಳೆದುಕೊಂಡ ದಂಪತಿ ಇದೀಗ ಐದು ಮಕ್ಕಳ ಜೀವ ಉಳಿಸಲು ಅತ್ಯಂತ ಧೈರ್ಯಶಾಲಿ ನಿರ್ಧಾರ ಕೈಗೊಂಡಿದ್ದಾರೆ. ಅರುಣ್ ಮತ್ತು ಶೆರಿನ್ ಅವರ ಈ ಸಾಹಸದಿಂದ 10 ತಿಂಗಳ ಅಲಿನ್ ಶೆರಿನ್ ಅಬ್ರಹಂ ಅವಳನ್ನು ಅಮರವಾಗಿ ಉಳಿಸಿಕೊಂಡಿದ್ದಾರೆ.

ಅಲಿನ್ ಶೆರಿನ್‌ ಪೋಷಕರ ಒಪ್ಪಿಗೆ ಮೇರೆಗೆ ಅಂಗಾಂಗಗಳನ್ನ ಕೇರಳದ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಈ ಮೂಲಕ 10 ತಿಂಗಳ ಅಲಿನ್ ಶೆರಿನ್ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ದಾನ ಕಾರ್ಯದಿಂದ ಅನೇಕ ಜೀವ ಉಳಿಯುವ ಅವಕಾಶ ದೊರೆತಿದ್ದು, ಇದು ಮಾನವೀಯತೆ ಮತ್ತು ಸಮಾಜ ಸೇವೆಯ ಮಹತ್ವವನ್ನು ಮತ್ತೆ ಒತ್ತಿ ತೋರಿಸಿದೆ.

ಫೆಬ್ರವರಿ 5ರಂದು ಮಧ್ಯಾಹ್ನ ಅಲಿನ್ ಶೆರಿನ್ ತನ್ನ ಕುಟುಂಬದೊಂದಿಗೆ ಕೊಟ್ಟಾಯಂನಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದಾಗ, ಪಲ್ಲಂ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅಲಿನ್‌ಳನ್ನು ತಕ್ಷಣ ತಿರುವನಂತಪುರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಆದರೆ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು. ಬಳಿಕ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ಫೆಬ್ರುವರಿ 10 ರಂದು ಅಲಿನ್ ನಿಧನಳಾದ ಸುದ್ದಿಯನ್ನು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು. ಅಪಘಾತದಲ್ಲಿ ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು.

ಅತೀವ ದುಃಖದ ನಡುವೆಯೂ, ಪೋಷಕರು ಅರುಣ್ ಮತ್ತು ಶೆರಿನ್ ಅವರ ಒಪ್ಪಿಗೆ ಮೇರೆಗೆ, ತಮ್ಮ ಪುತ್ರಿಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಕಣ್ಣು, ಹೃದಯ, ಕಿಡ್ನಿ ಮತ್ತು ಇತರ ಉಪಯುಕ್ತ ಅಂಗಾಂಗಗಳು ತಿರುವನಂತಪುರಂ ಮತ್ತು ಕೊಚ್ಚಿಯ ವಿವಿಧ ಆಸ್ಪತ್ರೆಗಳಿಗೆ ರವಾನಿಸಲ್ಪಟ್ಟವು. ರವಾನೆಗೆ ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಹಾಕಿ ಸುರಕ್ಷತೆ ಖಚಿತಪಡಿಸಿದರು.

ಈ ಮೂಲಕ ಅಲಿನ್ ಶೆರಿನ್ ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಹೆಸರು ಪಡೆದಿದ್ದಾರೆ ಮತ್ತು ಅವರ ಈ ಮಹತ್ವದ ಕೊಡುಗೆ ಸಮಾಜಕ್ಕೆ ಪ್ರೇರಣೆಯಾಗಿದೆ.

Ads on article

Advertise in articles 1

advertising articles 2

Advertise under the article