ಬೆಂಗಳೂರು :ಇವಳೆಂಥ ಪಾಪಿ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ..!!

ಬೆಂಗಳೂರು : ವಿದ್ಯಾಭ್ಯಾಸಕ್ಕಾಗಿ ಪೋಷಕರು ಒದಗಿಸಿದ್ದ ಮೊಬೈಲ್‌ನ್ನು ದುರುಪಯೋಗಪಡಿಸಿಕೊಂಡು, ಸ್ವಂತ ತಾಯಿ ಹಾಗೂ ದೊಡ್ಡಮ್ಮನವರ ಖಾಸಗಿ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ ಆರೋಪದ ಮೇರೆಗೆ ಯುವತಿಯೊಬ್ಬಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ ಬೈಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬೈಟರಾಯನಪುರ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ 49 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಆರೋಪಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ.
23 ವರ್ಷದ ಯುವತಿಯೊಬ್ಬಳು ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಪೋಷಕರಿಂದ ಮೊಬೈಲ್ ಪಡೆದುಕೊಂಡಿದ್ದಳು. ಕೆಲ ದಿನಗಳ ಹಿಂದೆ ಆಕೆ ಅಪರಿಚಿತ ಯುವಕನೊಂದಿಗೆ ನಿರಂತರವಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ತಾಯಿಯ ಗಮನಕ್ಕೆ ಬಂದಿತ್ತು. ವಿಚಾರಿಸಿದಾಗ ಯುವತಿ ಮೊಬೈಲ್ ನೀಡಲು ನಿರಾಕರಿಸಿದ್ದಲ್ಲದೆ, ಪಾಸ್‌ವರ್ಡ್ ಕೂಡ ಹಂಚಿಕೊಳ್ಳಲು ಸಿದ್ಧವಾಗಿರಲಿಲ್ಲ.
ಇತ್ತೀಚೆಗೆ ಮಗಳ ನಡವಳಿಕೆಯಲ್ಲಿ ಅಸಾಮಾನ್ಯ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ, ತಂದೆಯ ಸಹಾಯದಿಂದ ತಾಯಿ ಮೊಬೈಲ್ ಮತ್ತು ಪಾಸ್‌ವರ್ಡ್ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳವಳಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಯುವತಿಯು ತನ್ನ ತಾಯಿ ಹಾಗೂ ದೊಡ್ಡಮ್ಮನಿದ್ರೆಯಲ್ಲಿದ್ದ ವೇಳೆ ಅವರ ಖಾಸಗಿ ಫೋಟೋಗಳನ್ನು ರಹಸ್ಯವಾಗಿ ತೆಗೆದು, ಅವುಗಳನ್ನು ತನ್ನ ಪ್ರಿಯಕರ ವರುಣ್ ಅಲಿಯಾಸ್ ಗಿರಿಧರ್‌ಗೆ ಕಳುಹಿಸಿದ್ದಾಳೆ. ಅಲ್ಲದೆ, ದೊಡ್ಡಮ್ಮ ಸ್ನಾನ ಮಾಡುತ್ತಿದ್ದಾಗ ಅವರಿಗೆ ತಿಳಿಯದಂತೆ ನಗ್ನ ಚಿತ್ರಗಳನ್ನು ತೆಗೆದು ರವಾನಿಸಿದ್ದಾಳೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರಶ್ನಿಸಿದಾಗ, ಯುವತಿ ತಾನು ಪ್ರೀತಿಸುತ್ತಿರುವ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.
ವಿಷಯ ತಿಳಿದ ಬಳಿಕ ತಾಯಿ ಮಗಳಿಗೆ ಬುದ್ಧಿವಾದ ಹೇಳಿ, ಫೋಟೋಗಳನ್ನು ಡಿಲೀಟ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಭವಿಷ್ಯದಲ್ಲಿ ಈ ಚಿತ್ರಗಳು ದುರುಪಯೋಗವಾಗುವ ಆತಂಕದಿಂದ ಹಾಗೂ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸದ್ಯ ಯುವತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಯುವ ಪೀಳಿಗೆಯಲ್ಲಿ ಮೊಬೈಲ್ ಬಳಕೆಯ ಜವಾಬ್ದಾರಿ ಹಾಗೂ ಡಿಜಿಟಲ್ ಅರಿವಿನ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.