ಶಿವಮೊಗ್ಗ :ವೇಶ್ಯಾವಾಟಿಕೆ ಜಾಲ – ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ...!!!

ಶಿವಮೊಗ್ಗ : ಹಣದಾಸೆಗಾಗಿ ಮಹಿಳೆಯರನ್ನು ವೇಶ್ಯಾವಾಟಿಕೆ ಬಳಸಿಕೊಳ್ಳುತ್ತಿದ್ದ ಜಾಲವೊಂದನ್ನು ಭೇದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರಾವತಿಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ.
ಭದ್ರಾವತಿ ಹೊಸೂರು ಜೇಡಿಕಟ್ಟೆಯ ನಿವಾಸಿ ಚಂದ್ರಕಲಾ ಅಲಿಯಾಸ್ ಶ್ವೇತಾ (31), ಉಜ್ಜನಿಪುರದ ಎಸ್. ಶಿಲ್ಪಾ (35) ಹಾಗೂ ಹೊಸ ಸಿದ್ಧಾಪುರದ ಕವಿತಾ (40) ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಭದ್ರಾವತಿ ಪಟ್ಟಣದ ಉಜ್ಜನಿಪುರದ ಮಾರಿಯಮ್ಮ ದೇವಸ್ಥಾನದ ಹಿಂಭಾಗದ 3ನೇ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಕಾನೂನುಬಾಹಿರವಾಗಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಆರೋಪಿಗಳಾದ ಚಂದ್ರಕಲಾ ಮತ್ತು ಶಿಲ್ಪಾ, ಮತ್ತೋರ್ವ ಆರೋಪಿ ಕವಿತಾಳೊಂದಿಗೆ ಸೇರಿಕೊಂಡು ಹಣ ಸಂಪಾದನೆಯ ದುರುದ್ದೇಶದಿಂದ ಶಿಲ್ಪಾಳ ಮನೆಯನ್ನೇ ದಂಧೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅಲ್ಲಿಗೆ ಬೇರೆ ಕಡೆಯಿಂದ ಹೆಣ್ಣುಮಕ್ಕಳನ್ನು ಕರೆಸಿ, ಅವರನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು.
ಸುದೀರ್ಘ ವಿಚಾರಣೆಯ ನಂತರ, ಆರೋಪಿಗಳ ಮೇಲಿನ ಸಾಕ್ಷ್ಯಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಮೂವರು ಅಪರಾಧಿಗಳಿಗೆ ತಲಾ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಪ್ರತಿಯೊಬ್ಬರಿಗೂ ತಲಾ 1.61 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.