ಆಂಧ್ರ ಪ್ರದೇಶ :ನೆರೆ ಮನೆಯ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನೀರಿನ ಡ್ರಮ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ ಪಾಪಿ...!!

ಆಂಧ್ರಪ್ರದೇಶ :ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದು,ಇಡೀ ರಾತ್ರಿ ಬಾಲಕಿಯ ಶವವನ್ನು ತನ್ನ ಕೋಣೆಯಲ್ಲೇ ಇಟ್ಟುಕೊಂಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲೆ ಪಟ್ಟಣದಲ್ಲಿ ನಡೆದಿದೆ.
ಮಂಗಳವಾರ ಬಾಲಕಿಯ ಶವವು ಆರೋಪಿಯ ಮನೆಯಲ್ಲಿದ್ದ ನೀರಿನ ಡ್ರಮ್ನಲ್ಲಿ ಪತ್ತೆಯಾಗಿದೆ. ಸಂತ್ರಸ್ತೆಯ ಮನೆಯ ಸಮೀಪವೇ ವಾಸವಾಗಿದ್ದ ಕುಲವರ್ಧನ್ (30) ಎಂಬಾತನನ್ನು ಆರೋಪಿ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಕುಲವರ್ಧನ್ ಮಾದಕ ವ್ಯಸನಿ ಮತ್ತು ಕುಡುಕನಾಗಿದ್ದ. ಎರಡನೇ ತರಗತಿ ಓದುತ್ತಿದ್ದ ಈ ಬಾಲಕಿ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಆರೋಪಿಯು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಆಕೆಯನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಇಡೀ ರಾತ್ರಿ ಬಾಲಕಿಯ ಶವವನ್ನು ತನ್ನ ಕೋಣೆಯಲ್ಲೇ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಾವಿರಾರು ಜನರು ಮದನಪಲ್ಲೆ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದರು. ಪೊಲೀಸರು ಮನವೊಲಿಸಿ ಶವವನ್ನು ಆಸ್ಪತ್ರೆಗೆ ರವಾನಿಸಿದರು.ಈ ಕೃತ್ಯದ ಬೆನ್ನಲ್ಲೇ ಗ್ರಾಮದ ಸಮೀಪವಿರುವ ನೀರಿನ ಟ್ಯಾಂಕ್ ಬಳಿ ಮತ್ತೊಂದು ಶವ ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.