Mangalore: ಬಸ್ಸಿನಲ್ಲಿ ಮಹಿಳೆಯ ಬ್ಯಾಗ್ ಹಿಡಿದುಕೊಂಡ ಕಾರಣಕ್ಕೆ ಮುಸ್ಲಿಂ ವ್ಯಕ್ತಿಗೆ ತೀವ್ರ ಹಲ್ಲೆ ! ಹಿಂದು ಸಂಘಟನೆ ಯುವಕರಿಂದ ಕೃತ್ಯ !
Thursday, December 15, 2022
ಮಂಗಳೂರು : ಬಸ್ಸಿನಲ್ಲಿ ಹಿಂದೂ ಮಹಿಳೆಯ ಬ್ಯಾಗ್ ಹಿಡಿದುಕೊಂಡ ಕಾರಣಕ್ಕೆ ಹಿಂದೂ ಸಂಘಟನೆ ಯುವಕರು ಸೇರಿ ಮುಸ್ಲಿಂ ವ್ಯಕ್ತಿಗೆ ತೀವ್ರ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ.
ಮುಲ್ಲರಪಟ್ನ ನಿವಾಸಿ ಇಸಾಕ್ (45) ಹಲ್ಲೆಗೊಳಗಾದ ವ್ಯಕ್ತಿ. ಇಸಾಕ್ ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದು ಬುಧವಾರ ಬೆಳಗ್ಗೆ ಮೂಡುಬಿದ್ರೆ- ಬಿಸಿ ರೋಡ್ ಬಸ್ಸಿನಲ್ಲಿ ತೆರಳುತ್ತಿದ್ದಾಗ ಬಸ್ಸಿನಲ್ಲಿ ರಶ್ ಇದ್ದ ಕಾರಣಕ್ಕೆ ಮಹಿಳೆಯೊಬ್ಬರು ಇಸಾಕ್ ಅವರ ಕೈಗೆ ಪ್ಲಾಸ್ಟಿಕ್ ಬ್ಯಾಗ್ ಕೊಟ್ಟಿದ್ದರು. ಆನಂತರ, ತನ್ನ ಸ್ಟಾಪ್ ಬಂದಾಗ ಮಹಿಳೆ ಬ್ಯಾಗ್ ಪಡೆದು ಇಳಿದು ಹೋಗಿದ್ದರು. ಇದನ್ನು ಬಸ್ಸಿನಲ್ಲಿದ್ದ ವ್ಯಕ್ತಿಯೊಬ್ಬ ಬೇರೆ ರೀತಿಯಲ್ಲಿ ಅರ್ಥ ಮಾಡ್ಕೊಂಡು ಹಿಂದೂ ಸಂಘಟನೆಯ ಯುವಕರಿಗೆ ಮಾಹಿತಿ ನೀಡಿದ್ದ.
ರಾಯಿ ಎಂಬಲ್ಲಿ ಬಸ್ಸಿನಿಂದ ಇಳಿಯುತ್ತಿದ್ದ ಇಸಾಕ್ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಆನಂತರ, ಅಲ್ಲಿಯೇ ಮರಕ್ಕೆ ಕಟ್ಟಿ ಹಾಕಿ ದೊಣ್ಣೆಯಲ್ಲಿ ಹಲ್ಲೆ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ಕಂಡೆಕ್ಟರ್ ಬಗ್ಗೆಯೂ ಆರೋಪ ಕೇಳಿಬಂದಿದೆ. ಆದರೆ ಹಲ್ಲೆ ಕೃತ್ಯದಲ್ಲಿ ಕಂಡೆಕ್ಟರ್ ಇರಲಿಲ್ಲವೆಂದು ಇಸಾಕ್ ಪೊಲೀಸರಿಗೆ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಇಸಾಕ್ ಬಳಿ ಹೇಳಿಕೆ ಪಡೆದಿದ್ದಾರೆ.
ಇಸಾಕ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ನಾಲ್ವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.