ಬೆಳ್ತಂಗಡಿ: ಕಾಡಿನಲ್ಲಿ ದೊರೆತ ವಿಷಪೂರಿತ ಅಣಬೆ ಸೇವಿಸಿದ ತಂದೆ ಮಗನ ಸಾವು
Tuesday, November 22, 2022
ಬೆಳ್ತಂಗಡಿ; ಕಾಡಿನಲ್ಲಿ ದೊರೆತ ವಿಷ ಪೂರಿತ ಅಣಬೆ ಸೇವಿಸಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ನಡೆದಿದೆ.
ಪುದುವೆಟ್ಟು ಗ್ರಾಮದ ಮೀಯಾರುಪಾದೆ, ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಇವರ ಮಗ ಓಡಿ(45) ಮೃತಪಟ್ಟ ದುರ್ದೈವಿಗಳು. ತೀರ ಬಡ ಕುಟುಂಬದ ಇವರ ಮನೆಯಲ್ಲಿ ಗುರುವ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಇಂದು ಬೆಳಗ್ಗೆ ಇವರಿಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಕಂಡ ಸ್ಥಳೀಯರು ಆತಂಕಕ್ಕೀಡಾಗಿದ್ದರು.
ಕಾಡಿನ ಯಾವುದೋ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ ಕಾರಣ ಬದುಕುಳಿದಿದ್ದಾನೆ. ಘಟನೆ ವಿಚಾರ ತಿಳಿದು ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.