ನ್ಯಾಷನಲ್ ಜಿಯೋಗ್ರಾಫಿ :ಗೆಳೆಯರಾಗಿದ್ದವರೆ ಈಗ ಶತ್ರುಗಳು; 28ಕ್ಕೂ ಅಧಿಕ ಚಿಂಪಾಂಜಿ ಸಾವು..

ನ್ಯಾಷನಲ್ ಜಿಯೋಗ್ರಾಫಿ :ದಶಕಗಳ ಕಾಲ ಒಂದೇ ಕುಟುಂಬದಂತೆ ಬಾಳಿದ್ದ “ನ್ಗೊಗೊ” (Ngogo) ಚಿಂಪಾಂಜಿ ಸಮುದಾಯವು ಈಗ ಎರಡು ಬಣಗಳಾಗಿ ಸೀಳಿದ್ದು, ಪರಸ್ಪರ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಈ ಘಟನೆಯು ವಿಜ್ಞಾನಿಗಳಿಗೆ ಸಾಮಾಜಿಕ ಸಂಬಂಧಗಳು ಹೇಗೆ ಮುರಿದು ಬೀಳುತ್ತವೆ ಎಂಬ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ನೀಡುತ್ತಿದೆ.
ಸಂಶೋಧಕರ ಪ್ರಕಾರ, 2018ರಲ್ಲಿ ಬಹಿರಂಗವಾಗಿ ಆರಂಭವಾದ ಈ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 28 ಚಿಂಪಾಂಜಿಗಳು ಹತ್ಯೆಯಾಗಿವೆ. ಇದರಲ್ಲಿ ಪುಟ್ಟ ಮರಿಗಳೂ ಸೇರಿವೆ ಎಂಬುದು ವಿಷಾದನೀಯ. ಇನ್ನು ಕೆಲವು ಚಿಂಪಾಂಜಿಗಳು ನಾಪತ್ತೆಯಾಗಿದ್ದು, ಅವುಗಳನ್ನು ಕೂಡ ಸಾಯಿಸಿರಬಹುದು ಎಂದು ಶಂಕಿಸಲಾಗಿದೆ.
ನ್ಯಾಷನಲ್ ಜಿಯೋಗ್ರಾಫಿಕ್ ವರದಿಯ ಪ್ರಕಾರ, ಈ ಸಮುದಾಯದಲ್ಲಿರುವ “ವೆಸ್ಟರ್ನ್” (ಪಶ್ಚಿಮ) ಎಂಬ ಸಣ್ಣ ಆದರೆ ಹೆಚ್ಚು ಆಕ್ರಮಣಕಾರಿ ಬಣವು ಈಗ ಸಂಘಟಿತವಾಗಿ ಗಸ್ತು ತಿರುಗುತ್ತಿದೆ. ಇವು ಸಾಲಾಗಿ ಸಾಗಿ “ಸೆಂಟ್ರಲ್” (ಮಧ್ಯ) ಎಂಬ ಬಣದ ಮೇಲೆ ಅನಿರೀಕ್ಷಿತ ದಾಳಿ ಮಾಡುತ್ತಿವೆ. ಒಮ್ಮೆ ಸಂಖ್ಯಾಬಲದಲ್ಲಿ ಪ್ರಬಲವಾಗಿದ್ದ ಸೆಂಟ್ರಲ್ ಬಣವು ಈಗ ವೆಸ್ಟರ್ನ್ ಬಣದ ಸತತ ದಾಳಿಯಿಂದಾಗಿ ತನ್ನ ಸದಸ್ಯರನ್ನು ಕಳೆದುಕೊಂಡು ಕ್ಷೀಣಿಸುತ್ತಿದೆ.
ಈ ಸಂಘರ್ಷದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಇದು ಅಪರಿಚಿತ ಗುಂಪುಗಳ ನಡುವಿನ ಕಾಳಗವಲ್ಲ. ಈ ಹಿಂದೆ ನ್ಗೊಗೊ ಸಮುದಾಯವು ಸುಮಾರು 200 ಸದಸ್ಯರಿರುವ ಒಂದೇ ಒಂದು ಕುಟುಂಬವಾಗಿತ್ತು. ದಶಕಗಳ ಕಾಲ ಒಟ್ಟಿಗೆ ಆಹಾರ ಹಂಚಿಕೊಂಡು, ಪರಸ್ಪರರ ಮೈ ಸವರಿಕೊಂಡು (Grooming) ಗಾಢವಾದ ಸಂಬಂಧ ಹೊಂದಿದ್ದ ಚಿಂಪಾಂಜಿಗಳೇ ಈಗ ಒಬ್ಬರನ್ನೊಬ್ಬರು ಕೊಲ್ಲುತ್ತಿವೆ. ಈ ಗೆಳೆತನ ಹಗೆತನವಾಗಿ ಬದಲಾದ ಪ್ರಕ್ರಿಯೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಬಹಳ ನಿಧಾನವಾಗಿ ನಡೆದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಕಣ್ಣೀರು ತರಿಸುವ ‘ಬಾಸಿ’ ಸಾವಿನ ಕಥೆ
2019ರಲ್ಲಿ ಸಂಭವಿಸಿದ ‘ಬಾಸಿ’ ಎಂಬ ಗಂಡು ಚಿಂಪಾಂಜಿಯ ಸಾವು ಈ ಯುದ್ಧದ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಬಾಸಿಯನ್ನು ಎದುರಾಳಿ ಬಣದ ಸದಸ್ಯರು ಸುತ್ತುವರಿದು ಮನಬಂದಂತೆ ದಾಳಿ ಮಾಡಿದರು. ಬಾಸಿಗೆ ಹೊಡೆದವರೆಲ್ಲಾ ಅವನು ಹುಟ್ಟಿದಾಗಿನಿಂದ ಜೊತೆಗಿದ್ದವರೇ ಆಗಿದ್ದರು! ತೀವ್ರವಾಗಿ ಗಾಯಗೊಂಡ ಬಾಸಿ ಸಾವನ್ನಪ್ಪುವಾಗ, ಅವನ ಹಳೆಯ ಗೆಳೆಯನೊಬ್ಬ ಅವನ ಪಕ್ಕದಲ್ಲೇ ಇದ್ದು, ಅವನು ನಡೆಯಲು ಸಹಾಯ ಮಾಡಲು ಪ್ರಯತ್ನಿಸಿದ ಮತ್ತು ಬಾಸಿ ಕೊನೆಯುಸಿರು ಎಳೆಯುವವರೆಗೂ ಅವನ ಜೊತೆಗೇ ಇದ್ದ ದೃಶ್ಯ ಸಂಶೋಧಕರ ಕಣ್ಣನ್ನು ಒದ್ದೆ ಮಾಡಿತ್ತು.
ಮನಸ್ತಾಪಕ್ಕೆ ಕಾರಣವೇನು?
ಈ ಯುದ್ಧಕ್ಕೆ ಸಾಮಾಜಿಕ ಅಸ್ಥಿರತೆ ಮತ್ತು ಹವಾಮಾನದ ಒತ್ತಡ ಕಾರಣವಿರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. 2014ರ ಅವಧಿಯಲ್ಲಿ ಗುಂಪಿನಲ್ಲಿದ್ದ ಹಿರಿಯ ಮತ್ತು ಪ್ರಭಾವಿ ಚಿಂಪಾಂಜಿಗಳು ಅನಾರೋಗ್ಯದಿಂದ ಮೃತಪಟ್ಟವು. ಇವು ಇಡೀ ಗುಂಪನ್ನು ಬೆಸೆಯುವ ಶಕ್ತಿಯಾಗಿದ್ದವು. ಹೊಸ ‘ಆಲ್ಫಾ ಮೇಲ್’ (ನಾಯಕ) ಅಧಿಕಾರಕ್ಕೆ ಬಂದಾಗ ಹಳೆಯ ವ್ಯವಸ್ಥೆಯಲ್ಲಿ ಗೊಂದಲ ಉಂಟಾಯಿತು. ದಾಳಿ ಆರಂಭವಾಗುವ ಮೊದಲೇ ವಿಜ್ಞಾನಿಗಳು ಒಂದು ಬದಲಾವಣೆ ಗಮನಿಸಿದ್ದರು. ಚಿಂಪಾಂಜಿಗಳು ಹಳೆಯಂತೆ ಪರಸ್ಪರ ಬೆರೆಯುವುದನ್ನು ನಿಲ್ಲಿಸಿದ್ದವು. ಗುಂಪುಗಳ ನಡುವೆ ಸಂವಹನ ಕಡಿಮೆಯಾಗಿ ದೂರ ಉಳಿಯಲು ಆರಂಭಿಸಿದವು. ಆ ಅಂತರವೇ ಇಂದು ರಕ್ತಪಾತಕ್ಕೆ ದಾರಿಯಾಗಿದೆ.