ಇರಾನ್ :ನಮ್ಮೊಂದಿಗೆ ನಿಂತಿರುವ ಸ್ನೇಹಿತ ಭಾರತಕ್ಕೆ ಥ್ಯಾಂಕ್ಯೂ ಎಂದ ಇರಾನ್!!
Thursday, March 19, 2026

ಇರಾನ್-ಇಸ್ರೇಲ್: ನಡುವಿನ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಪರವಾಗಿ ನಿಂತು ತಾನೂ ಇರಾನ್ ಮೇಲೆ ದಾಳಿ ನಡೆಸಿತ್ತು. ಹೀಗಾಗಿ, ಅಕ್ಕಪಕ್ಕದ ಈ ಎರಡು ದೇಶಗಳ ನಡುವಿನ ಯುದ್ಧದಲ್ಲಿ ಅಮೆರಿಕ ಕೂಡ ಮುಖ್ಯ ಭಾಗ ಪಡೆದಿದೆ. ಈ ಯುದ್ಧದಲ್ಲಿ ಭಾರತ ಯಾವ ದೇಶದ ಪರವಾಗಿದೆ ಎಂದು ಘೋಷಿಸದಿದ್ದರೂ ಮೊದಲಿನಿಂದಲೂ ಇಸ್ರೇಲ್ ಜೊತೆ ಭಾರತ ಸರ್ಕಾರ ಕೊಂಚ ಹೆಚ್ಚು ಆತ್ಮೀಯತೆ ಹೊಂದಿದೆ. ಇದೀಗ ಭಾರತ ಯುದ್ಧದಿಂದ ವಿನಾಶದಂಚಿಗೆ ತಲುಪಿರುವ ಇರಾನ್ ದೇಶಕ್ಕೆ ವೈದ್ಯಕೀಯ ಕಿಟ್ಗಳನ್ನು ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದೆ.ಈ ನೆರವಿಗೆ ಇರಾನ್ ಸರ್ಕಾರ ಮತ್ತು ಜನತೆ ಕೃತಜ್ಞತೆ ವ್ಯಕ್ತಪಡಿಸಿದೆ.
ಟೆಹ್ರಾನ್‌ನಲ್ಲಿರುವ ಇರಾನಿನ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಭಾರತದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದೆ. “ಈ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತಿರುವ ಸ್ನೇಹಿತ ಭಾರತಕ್ಕೆ ನಾವು ಹೃತ್ಪೂರ್ವಕ ಕೃತಜ್ಞರಾಗಿದ್ದೇವೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಹೇಳಿಕೆ ಎರಡು ದೇಶಗಳ ನಡುವಿನ ಸ್ನೇಹ ಮತ್ತು ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
ಭಾರತದಿಂದ ಕಳುಹಿಸಲಾದ ನೆರವು ಮುಖ್ಯವಾಗಿ ವೈದ್ಯಕೀಯ ಸಾಮಗ್ರಿಗಳು, ಔಷಧಿಗಳು ಮತ್ತು ತುರ್ತು ಅವಶ್ಯಕತೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ. ಇವು ಸಂಕಷ್ಟದಲ್ಲಿರುವ ಜನರಿಗೆ ತುರ್ತು ನೆರವಾಗಿ ಸಹಾಯವಾಗುತ್ತಿವೆ. ಈ ಸಹಾಯವು ಮಾನವೀಯ ದೃಷ್ಟಿಕೋನದಿಂದ ಮಹತ್ವದ್ದಾಗಿದ್ದು, ರಾಜಕೀಯ ಅಥವಾ ಸೈನಿಕ ಅಂಶಗಳನ್ನು ಮೀರಿ ಮಾನವೀಯತೆಯ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ.