ಶರಣವ್ವ ಭಜಂತ್ರಿ, ಪಾರವ್ವ ಗಾಣಿಗೇರ, ಸೂರವ್ವ ಕೊಲ್ಲದ್ ಹಾಗೂ ಸುವರ್ಣ ಪಾಟೀಲ ಉದ್ಯೋಗ ಕಳೆದುಕೊಂಡು ಧರಣಿ ನಡೆಸುತ್ತಿದ್ದ ಮಹಿಳಾ ಕಾರ್ಮಿಕರು. ಶುಕ್ರವಾರ ಕೇಂದ್ರ ಕಾರ್ಮಿಕ ಇಲಾಖೆಯ ಮಂಗಳೂರು ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ನಾಲ್ವರು ಮಹಿಳೆಯರನ್ನು ಮರುನೇಮಕ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಎಚ್‌ಪಿಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ನಾಲ್ವರು ಮಹಿಳೆಯರಿಗೆ ಹೌಸ್ ಕೀಪಿಂಗ್ ವಿಭಾಗದಲ್ಲಿ ಕೆಲಸ ನೀಡಲು ಕಂಪೆನಿ ಒಪ್ಪಿಗೆ ಸೂಚಿಸಿದೆ. ಆದರೆ, ಯಾವ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ನೀಡಬೇಕು ಎಂಬುದನ್ನು ಡಿಸೆಂಬರ್ 2ರಂದು ನಡೆಯುವ ಮುಂದಿನ ಸಭೆಯಲ್ಲಿ ಅಂತಿಮಗೊಳಿಸಲಾಗುವುದು. ಅಷ್ಟರೊಳಗೆ ಮರುನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಯವರೆಗೆ ಧರಣಿ ಮುಂದುವರಿಸದಂತೆ ಸೂಚಿಸಿದ ಹಿನ್ನೆಲೆಯಲ್ಲಿ ಮಹಿಳಾ ಕಾರ್ಮಿಕರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಮರುನೇಮಕಾತಿ ಭರವಸೆಯಿಂದ ನೆಮ್ಮದಿ: ಶರಣವ್ವ ಭಜಂತ್ರಿ
ಈ ಕುರಿತು ಪ್ರತಿಕ್ರಿಯಿಸಿದ ಹೋರಾಟ ನಿರತ ಮಹಿಳಾ ಕಾರ್ಮಿಕೆ ಶರಣವ್ವ ಭಜಂತ್ರಿ, "ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದೆವು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ಎಚ್‌ಪಿಸಿಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೆಲಸ ಕೊಡಿಸುವಂತೆ ಸೂಚಿಸಿದ್ದರು. ಇದೀಗ ಕಾರ್ಮಿಕ ಇಲಾಖೆಯ ಸಭೆಯಲ್ಲಿ ಹೌಸ್ ಕೀಪಿಂಗ್ ಕೆಲಸ ನೀಡುವ ಭರವಸೆ ಸಿಕ್ಕಿದೆ. ಡಿಸೆಂಬರ್ 2ರ ಸಭೆಯಲ್ಲಿ ಗುತ್ತಿಗೆದಾರರ ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಮುನೀರ್ ಕಾಟಿಪಳ್ಳ ಸೇರಿದಂತೆ ಹೋರಾಟಗಾರರು ಹಾಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ನಮಗೆ ಮರುಜೀವ ಸಿಕ್ಕಂತಾಗಿದೆ" ಎಂದು ಕೃತಜ್ಞತೆ ಸಲ್ಲಿಸಿದರು.
ವಿವಿಧ ಸಂಘಟನೆಗಳಿಂದ ಹೋರಾಟಕ್ಕೆ ಬೆಂಬಲ
ಸಿಐಟಿಯು ಹಾಗೂ ನಾಗರಿಕ ಹೋರಾಟ ಸಮಿತಿ (ಸುರತ್ಕಲ್) ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಬೆಂಬಲ ನೀಡಿದ್ದವು.
ಮಾಜಿ ಶಾಸಕ ಮೊಯ್ದಿನ್ ಬಾವಾ, ಸಿಐಟಿಯು ರಾಜ್ಯ ನಾಯಕಿ ಮೀನಾಕ್ಷಿ ಸುಂದರಂ, ಜಿಲ್ಲಾ ಮುಖಂಡರಾದ ಬಿ.ಎಂ. ಭಟ್ ಹಾಗೂ ಸುನಿಲ್ ಕುಮಾರ್ ಬಜಾಲ್ ಸೇರಿದಂತೆ ಹಲವರು ಹೋರಾಟಕ್ಕೆ ಕೈಜೋಡಿಸಿದ್ದರು
81 ದಿನಗಳ ಹೋರಾಟದ ಬಳಿಕ ಮರುನೇಮಕಾತಿಯ ಭರವಸೆ ದೊರೆತಿರುವುದು ಮಹಿಳಾ ಕಾರ್ಮಿಕರಲ್ಲಿ ಸಂತಸ ಮೂಡಿಸಿದೆ. ಡಿಸೆಂಬರ್ 2ರಂದು ನಡೆಯಲಿರುವ ಸಭೆಯ ನಿರ್ಧಾರದ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.
