ಮಧ್ಯಪ್ರದೇಶ :ಪ್ರೀತಿಸಿ ಮದುವೆಯಾಗುವ ಜೋಡಿಗೆ ಈ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ...!!!

ಮಧ್ಯಪ್ರದೇಶ :ಪ್ರೀತಿಸಿ ಮದುವೆಯಾಗುವ ಜೋಡಿಗೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಗ್ರಾಮದ ನಿವಾಸಿಗಳು ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಘೋಷಿಸಿದ್ದಾರೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾ ಕೇಂದ್ರದಿಂದ 50 ಕೀ.ಮೀ ದೂರದಲ್ಲಿರುವ ಪಂಚೇವಾ ಗ್ರಾಮದಲ್ಲಿ ಜನವರಿ 23ರಂದು ಈ ಆದೇಶ ಹೊರಡಿಸಲಾಗಿದೆ.
ಕಳೆದ ಆರು ತಿಂಗಳಲ್ಲಿ ಗ್ರಾಮದಲ್ಲಿ ಎಂಟು ಜೋಡಿಗಳು ಪೋಷಕರ ಒಪ್ಪಿಗೆ ಇಲ್ಲದೆ ಮದುವೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಬಹಿಷ್ಕಾರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.
‘ಪ್ರೀತಿಸಿ ಮದುವೆಯಾಗುವ ಜೋಡಿ ಹಾಗೂ ಅವರ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ ಮತ್ತು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ. ಜತೆಗೆ, ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡುವವರೂ ಸಹ ಇದೇ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಘೋಷಣೆ ಕೂಗಲಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ಪ್ರೀತಿಸಿ ಮದುವೆಯಾಗುವ ಜೋಡಿಗೆ ಉದ್ಯೋಗಾವಕಾಶ ನೀಡುವುದಿಲ್ಲ. ಹಾಲು ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳನ್ನು ನಿರಾಕರಿಸಲಾಗುತ್ತದೆ’ ಎಂದೂ ವ್ಯಕ್ತಿ ಹೇಳಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
‘ಪ್ರೇಮ ವಿವಾಹ ವಿರುದ್ಧದ ನಿರ್ಧಾರವನ್ನು ಗ್ರಾಮ ಸಭೆ ತೆಗೆದುಕೊಂಡಿಲ್ಲ. ಆದರೆ, ಕೆಲವು ಗ್ರಾಮಸ್ಥರು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಮಿಶಾ ಸಿಂಗ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಆಧರಿಸಿ ಘೋಷಣೆ ಕೂಗುತ್ತಿರುವ ವ್ಯಕ್ತಿಯನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಕುಮಾರ್ ಲಾಲ್ ತಿಳಿಸಿದ್ದಾರೆ.