ಮಂಗಳೂರು: ಯುದ್ಧ ಸ್ಮಾರಕದಲ್ಲಿದ್ದ ಟಿ-55 ಟ್ಯಾಂಕ್ ಮೇಲೆ ಯುವಕರ ಕಿಡಿಗೇಡಿತನ: ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
ಮಂಗಳೂರು: ನಗರದ ಕದ್ರಿ ಯುದ್ಧ ಸ್ಮಾರಕದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ಮುಂಭಾಗದಲ್ಲಿರುವ ಕದ್ರಿ ಯುದ್ಧ ಸ್ಮಾರಕದಲ್ಲಿ 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ ಟಿ-55 (T-55) ಯುದ್ಧ ಟ್ಯಾಂಕ್ ಅನ್ನು ಇರಿಸಲಾಗಿದೆ. ಮುಖ್ಯರಸ್ತೆಯ ಬದಿಯ ಎತ್ತರದ ಸ್ಥಳದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಈ ಟ್ಯಾಂಕ್ ಅನ್ನು ಸ್ಥಾಪಿಸಲಾಗಿದೆ.
ಆದರೆ, ರಾತ್ರಿ ವೇಳೆ ಇಬ್ಬರು ಯುವಕರು ಟ್ಯಾಂಕ್ ಮೇಲೆ ಹತ್ತಿ, ಅದರ ಹ್ಯಾಚ್ ತೆರೆದು ಒಳಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತಮ್ಮ ಕಿಡಿಗೇಡಿತನದ ಕೃತ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯೋಧರ ಶೌರ್ಯ, ತ್ಯಾಗ ಮತ್ತು ದೇಶದ ರಕ್ಷಣೆಯಲ್ಲಿ ಸೇನೆಯ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಈ ರೀತಿಯ ವರ್ತನೆ ತೋರಿರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಶೇಷವೆಂದರೆ, ಕದ್ರಿ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುದ್ಧ ಸ್ಮಾರಕದ ಗೌರವಕ್ಕೆ ಧಕ್ಕೆ ತಂದಿರುವ ಯುವಕರನ್ನು ಪೊಲೀಸರು ಕೂಡಲೇ ಪತ್ತೆಹಚ್ಚಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.