BREAKING
ದಕ್ಷಿಣ ಕನ್ನಡ

ಮಂಗಳೂರು:ಬಂಟ್ವಾಳದಲ್ಲಿ ಚಿಕ್ಕಪ್ಪನನ್ನೇ ಇರಿದು ಕೊಂದ ಸಹೋದರನ ಮಗಳು!ಹರಿತವಾದ ಆಯುಧದಿಂದ ಇರಿತ, ಸ್ಥಳದಲ್ಲೇ ವ್ಯಕ್ತಿ ಸಾವು

ಮಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರನ ಮಗಳೇ ಚಿಕ್ಕಪ್ಪನನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದ ನಂದರಬೆಟ್ಟುವಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (50) ಕೊಲೆಯಾದವರು.

ಮಂಗಳವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಚೆನ್ನಯ್ಯ ಪೂಜಾರಿ ಅವರು ತಮ್ಮ ಸಹೋದರನ ಮಗಳು ವಾಸವಿದ್ದ ಮನೆಯ ಬಳಿ ಬಂದು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ತೀವ್ರ ಜಗಳಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸಹೋದರನ ಮಗಳು ಮನೆಯಲ್ಲಿದ್ದ ಹರಿತವಾದ ಆಯುಧದಿಂದ ಚೆನ್ನಯ್ಯ ಪೂಜಾರಿ ಅವರಿಗೆ ಇರಿದಿದ್ದಾರೆ ಎನ್ನಲಾಗಿದೆ.

ಹರಿತವಾದ ಆಯುಧದ ಇರಿತದಿಂದ ಗಂಭೀರವಾಗಿ ಗಾಯಗೊಂಡ ಚೆನ್ನಯ್ಯ ಪೂಜಾರಿ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

📢 ಡೇ ಕರ್ನಾಟಕ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!