ಮಂಗಳೂರು: ಡೆತ್ ನೋಟ್ ಬರೆದಿಟ್ಟು ಕರಾವಳಿ ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣು
Wednesday, March 16, 2022
ಪ್ರಾಧ್ಯಾಪಕರೋರ್ವರಿಂದ ಮಾನಸಿಕ ಕಿರಿಕಿರಿಯಾಗುತ್ತಿದೆ ಎಂದು ಡೆತ್ ನೋಟ್ ಬರೆದಿಟ್ಟು ಮಂಗಳೂರು ನಗರದ ಕಾಲೇಜೊಂದರ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ನಗರದ ಕರಾವಳಿ ಕಾಲೇಜ್ ನಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಕಲಿಯುತ್ತಿರುವ, ಮೂಲತಃ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆ ನಿವಾಸಿ ಭರತ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಭರತ್ ತಾನು ವಾಸವಾಗಿದ್ದ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಅದಕ್ಕಿಂತ ಮೊದಲು ಆತ ತನ್ನ ತಾಯಿಗೆ ಕರೆ ಮಾಡಿದ್ದಾನೆ. ಆದರೆ ಅವರಿಗೆ ಕರೆ ಸ್ವೀಕರಿಸಲು ಸಾಧ್ಯವಾಗದ ಕಾರಣ ಅವರ ವಾಟ್ಸ್ಆ್ಯಪ್ ನಂಬರ್ ಗೆ ''ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾನು ಮಾಡಿದ Project work ಸರಿಯಿಲ್ಲವೆಂದು ಸಹಿ ಮಾಡದೆ ಕಿರಿ ಕಿರಿ ಮಾಡಿದ್ದರು. ಅಲ್ಲದೆ ಮನಸ್ಸಿಗೆ ನೋವಾಗುವಂತೆ ವರ್ತಿಸಿ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದ್ದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ'' ಎಂದು ಮೆಸೇಜ್ ಮಾಡಿದ್ದಾನೆ. ಆ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇಂದು ಮಂಗಳೂರಿಗೆ ಬಂದಿರುವ ಭರತ್ ಹೆತ್ತವರು ತಮ್ಮ ಮಗನ ಸಾವಿಗೆ ಕಾರಣನಾದ ಪ್ರಾಧ್ಯಾಪಕ ಮತ್ತು ಕಾಲೇಜು ಅಧ್ಯಕ್ಷರ ಮೇಲೂ ಪೊಲೀಸ್ ದೂರು ದಾಖಲಿಸಿದ್ದು ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಕೊಡಬೇಕೆಂದು ಉರ್ವ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.