ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ರಸ್ತೆ ಅಪಘಾತದಲ್ಲಿ ಮೃತ್ಯು(Accident)
Wednesday, January 19, 2022
ಮೂಡಬಿದ್ರೆ: ಇಲ್ಲಿನ ಪುರಸಭೆ ಸಮೀಪದ ಗಂಟಾಲ್ಕಟ್ಟೆ ಎಂಬಲ್ಲಿ ಮಾರುತಿ ಓಮ್ನಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿರುವ ಅಪಘಾತವೊಂದರಲ್ಲಿ ಖ್ಯಾತ ಯಕ್ಷಗಾನ ಕಲಾವಿದರೋರ್ವರು ಮೃತಪಟ್ಟಿದ್ದಾರೆ
ಹಿರಿಯಡ್ಕ ಮೇಳದ ಕಲಾವಿದರಾಗಿರುವ ವಾಮನ ಕುಮಾರ್ ನಿನ್ನೆ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಮುಗಿಸಿ ಬೈಕ್ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಬೆಳಗ್ಗಿನ ಜಾವ ಗಂಟಾಲ್ಕಟ್ಟೆ ಎಂಬಲ್ಲಿ ಬರುತ್ತಿದ್ದ ಸಂದರ್ಭ ಇವರ ಬೈಕ್ ಗೆ ಮಾರುತಿ ಓಮ್ನಿಯೊಂದು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳ ಕೇಂದ್ರದಲ್ಲಿ ಯಕ್ಷಗಾನದ ಹೆಜ್ಜೆಯನ್ನು ಕಲಿತ ಇವರು, ಮುಂದೆ ಧರ್ಮಸ್ಥಳ ಮೇಳದಲ್ಲಿಯೇ ಯಕ್ಷ ಪಯಣ ಆರಂಭಿಸಿದರು. ಆ ಬಳಿಕ ಕದ್ರಿ, ಮಂಗಳಾದೇವಿ ಮೇಳದಲ್ಲಿ ಸ್ತ್ರೀವೇಷದಲ್ಲಿ ಖ್ಯಾತಿ ಹೊಂದಿದ್ದ ಇವರು ಕೆಲ ವರ್ಷಗಳಿಂದ ಹಿರಿಯಡ್ಕ ಮೇಳದಲ್ಲಿ ಕಲಾವಿದನಾಗಿ, ಮೇಳದ ಮ್ಯಾನೇಜರ್ ಆಗಿ ಮೇಳವನ್ನು ಮುನ್ನಡೆಸುತ್ತಿದ್ದರು.
ಸುಮಾರು 30 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ದುಡಿಯುತ್ತಿರುವ ಇವರು ಸ್ತ್ರೀವೇಷ- ಪುಂಡು ವೇಷಗಳೆರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಮೃತರು ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.