ಮಂಗಳೂರು: ಕುಕ್ಕರ್ ಸ್ಫೋಟಗೊಂಡು ಗಾಯಗೊಂಡ ಪುರುಷೋತ್ತಮ ಪೂಜಾರಿ ಮನೆ ನವೀಕರಣ. ಪದ್ಮರಾಜ್ ಆರ್. ನೇತೃತ್ವದ ಗುರುಬೆಳದಿಂಗಳು ಫೌಂಡೇಶನ್‌ನಿಂದ ಮಾನವೀಯ ಕಾರ್ಯ
Sunday, December 18, 2022
ಮಂಗಳೂರು: ಇತ್ತೀಚೆಗೆ ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರ ಮನೆ ನವೀಕರಣ ‘ಗುರುಬೆಳದಿಂಗಳು ಫೌಂಡೇಶನ್’ ಮೂಲಕ ಶೀಘ್ರ ಆರಂಭಗೊಳ್ಳಲಿದೆ.
ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ರವರು, ಘಟನೆ ನಡೆದ ಮರುದಿನವೇ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ನಿಗಾ ಇಟ್ಟುಕೊಂಡು ಫಾದರ್‌ಮುಲ್ಲರ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಜತೆ ಮಾತುಕತೆ ನಡೆಸಿದ ಬೇಕಾದ ವ್ಯವಸ್ಥೆ ಮಾಡಿದ್ದರು. ಬಳಿಕವೂ ಪುರುಷೋತ್ತಮ ಪೂಜಾರಿ ಮತ್ತು ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಕಳೆದ ವಾರ ಆಸ್ಪತ್ರೆಯಲ್ಲಿರುವ ಪುರುಷೋತ್ತಮ ಪೂಜಾರಿಯವರನ್ನು ಭೇಟಿಯಾದಾಗ ತನ್ನ ನೋವಿನ ಜತೆಗೆ ಬರುವ ಮೇ ತಿಂಗಳಿನಲ್ಲಿ ಮಗಳ ಮದುವೆ ಮಾಡಬೇಕು, ಅದಕ್ಕಿಂತ ಮೊದಲು ಮನೆಯನ್ನು ನವೀಕರಣಗೊಳಿಸಬೇಕು ಎನ್ನುವ ನನ್ನ ಕನಸು ನನಸು ಮಾಡಲು ಸಾಧ್ಯವಾಗಿಲ್ಲ ಎಂಬ ನೋವಿನಿಂದ ಆತ್ಮವಿಶ್ವಾಸ ಕಳೆದುಕೊಂಡು ಮತ್ತಷ್ಟು ನೊಂದುಕೊಂಡು ದುಃಖವನ್ನು ವ್ಯಕ್ತಪಡಿಸಿದ್ದರು.
ಈ ವೇಳೆ ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ‘ಗುರುಬೆಳದಿಂಗಳು ಫೌಂಡೇಶನ್’ ಮಾಡಲಿದೆ ಎಂದು ಪದ್ಮರಾಜ್‌ರವರು ಅವರಿಗೆ ಆತ್ಮಸ್ಥೈರ್ಯ ನೀಡಿದ್ದರು. ಅದರಂತೆ ಭಾನುವಾರ (ಡಿ.18) ಪುರುಷೋತ್ತಮ ಪೂಜಾರಿಯವರ ಮನೆಗೆ ಇಂಜಿನಿಯರ್ ದೀವರಾಜ್ ರೊಂದಿಗೆ ಭೇಟಿ ನೀಡಿದ ಪದ್ಮರಾಜ್ ಆರ್.ರವರು ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಮನೆಯನ್ನು ಪರಿಶೀಲಿಸಿ ನವೀಕರಣಗೊಳಿಸುವ ಭರವಸೆ ನೀಡಿದ್ದು, ಮುಂದಿನ ವಾರದಿಂದ ಕಾಮಗಾರಿ ನಡೆಸುವುದಾಗಿ ತಿಳಿಸಿದರು.