ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಕಾರಿಗೆ ಅಡ್ಡಗಟ್ಟಿ ತಲವಾರು ಝಳಪಿಸಿದ ದುಷ್ಕರ್ಮಿಗಳು
Thursday, October 13, 2022
ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ತಲವಾರು ಝಳಪಿಸಿದ ಆತಂಕಕಾರಿ ಘಟನೆಯೊಂದು ನಿನ್ನೆ ರಾತ್ರಿ 11.30ರ ವೇಳೆಗೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ತನ್ನ ಕಾರನ್ನು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ಹರೀಶ್ ಪೂಂಜಾ ಅವರು ಇದ್ದ ವೇಳೆ ಪಡೀಲ್ ನಿಂದ ಫರಂಗಿಪೇಟೆಯವರೆಗೆ ಕಾರನ್ನು ದುಷ್ಕರ್ಮಿಗಳ ತಂಡ ಬೆನ್ನಟ್ಟಿದೆ.
ಫರಂಗಿಪೇಟೆಯಲ್ಲಿ ಕಾರನ್ನು ಸೈಡ್ ಹಾಕುತ್ತಿದ್ದಂತೆಯೇ ಅವ್ಯಾಚ್ಯವಾಗಿ ಬೈದು ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.