ಮಂಗಳೂರು: ನಿಷೇಧಿತ ಮಾದಕದ್ರವ್ಯ ಎಂಡಿಎಂಎ ಸಾಗಾಟದ ಆರೋಪಿ ಸೆರೆ
Friday, December 23, 2022
ಮಂಗಳೂರು: ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಅನ್ನು ಬಂಧಿಸಿರುವ ಬಜ್ಪೆ ಪೊಲೀಸರು 43 ಸಾವಿರ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್ ಕೃಷ್ಣಾಪುರ ನಿವಾಸಿ ಸಾಹಿಲ್ ಇಸ್ಮಾಯಿಲ್ (28) ಬಂಧಿತ ಆರೋಪಿ.
ಬಜ್ಪೆ ಠಾಣಾ ಉಪ ಪೊಲೀಸ್ ನಿರೀಕ್ಷಕರು ಸಿಬ್ಬಂದಿಯೊಂದಿಗೆ ಡಿ.23ರಂದು ಬಜ್ಪೆಯ ಶಾಂತಿಗುಡ್ಡೆಯ ಬಳಿಯ ಬಸ್ ನಿಲ್ದಾಣದ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಸ್ಕೂಟರ್ ನಲ್ಲಿ ಆಗಮಿಸಿರುವ ಸಾಹಿಲ್ ಇಸ್ಮಾಯಿಲ್ ನನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತನ ಬಳಿ 3,000 ರೂ. ಮೌಲ್ಯದ 1.21 ಗ್ರಾಂ ತೂಕದ ಎಂಡಿಎಂಎ ಮಾದವ ವಸ್ತು ಪತ್ತೆಯಾಗಿದೆ. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಇನ್ನೋರ್ವ ಆರೋಪಿ ಯಾಸಿ ಅಲಿಯಾಸ್ ಯಾಚಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿಯಿಂದ 1 ಸ್ಕೂಟರ್ ಅನ್ನು ವಶಕ್ಕೆ ಪಡೆಯಲಾಗಿದೆ. ಅದರ ಅಂದಾಜು ಮೌಲ್ಯ 40,000 ರೂ. ಆಗಿದೆ. ಸಾಹಿಲ್ ಇಸ್ಮಾಯಿಲ್ ವಿರುದ್ಧ ಬಜ್ಪೆ, ಬರ್ಕೆ, ಸುರತ್ಕಲ್, ಪಣಂಬೂರು, ಹಾಸನ ಪೊಲೀಸ್ ಠಾಣೆಗಳಲ್ಲಿ ಕೊಲೆ ಸುಲಿಗೆ ಪ್ರಕರಣ ದಾಖಲಾಗಿದೆ.