ಮಂಗಳೂರು: ಅಪಘಾತದ ಗಾಯಾಳುವಿನ ಬ್ರೈನ್ ಡೆಡ್ ; ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ
Tuesday, May 31, 2022
ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದ ವಾಹನ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಮಿದುಳು ನಿಷ್ಕ್ರಿಯಗೊಂಡಿದ್ದು, ಇದೀಗ ಆತನ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದ್ದಾರೆ.
ಮಂಗಳೂರಿನ ಕುಡುಪುಕಟ್ಟೆ ನಿವಾಸಿ ಇಪ್ಪತ್ತೈದು ವರ್ಷದ ಧೀರಜ್ ಮಿದುಳು ನಿಷ್ಕ್ರಿಯಗೊಂಡಿರುವ ಯುವಕ. ಮೇ 29 ರಂದು ಬೆಳಗ್ಗಿನ ಜಾವ ಧೀರಜ್ ತನ್ನ ಗೆಳೆಯ ಗಣೇಶ ಎಂಬಾತನೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭ ಬಿಕರ್ನಕಟ್ಟೆ ಬಳಿ ನಿಯಂತ್ರಣ ತಪ್ಪಿ ವಾಹನ ಡಿವೈಡರ್ ಢಿಕ್ಕಿ ಹೊಡೆದು ಅಪಘಾತಗೊಂಡಿತ್ತು.
ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆಗ ಆ ದಾರಿಯಲ್ಲಿ ಸಂಚರಿಸುತ್ತಿದ್ದ ಆಟೊರಿಕ್ಷಾ ಚಾಲಕರೊಬ್ಬರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ರಾತ್ರಿ ವೇಳೆ ಧೀರಜ್ ನ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ವೈದ್ಯರು ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಧೀರಜ್ ನ ಆರ್ಗನ್ ಡೊನೆಟ್ ಮಾಡಲು ಆತನ ಪೋಷಕರು ನಿರ್ಧರಿಸಿದ್ದಾರೆ. ಚೆನ್ನೈನ ವೈದ್ಯರ ತಂಡವೊಂದು ಮಂಗಳೂರಿನ ಎ ಜೆ ಹಾಸ್ಪಿಟಲ್ ಗೆ ಆಗಮಿಸಿ ಧೀರಜ್ ನ ದೇಹದ ಅಂಗಾಂಗಳನ್ನು ಕೊಂಡೊಯ್ಯಲಿದೆ.