Mangalore: ಮಂಗಳೂರಿನಲ್ಲಿ SDPI,PFI ಕಚೇರಿ ಮೆಲೆ ನಡೆದ NIA ದಾಳಿ ಕಾರ್ಯಾಚರಣೆ ಅಂತ್ಯ:ಪಿಎಫ್ಐ ಮುಖಂಡ ಎಕೆ ಅಶ್ರಫ್ ಸೇರಿ ಮೂವರನ್ನು ವಶಕ್ಕೆ ಪಡೆದ ಎನ್ಐಎ
Wednesday, September 21, 2022
ಮಂಗಳೂರು: ಮಂಗಳೂರಿನಲ್ಲಿ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಕಚೇರಿಗಳು ಮತ್ತು ನಾಯಕರ ಮನೆಗೆ ನಡೆದ ಎನ್‌ಐಎ ದಾಳಿ ಅಂತ್ಯಗೊಂಡಿದ್ದು ಹಲವು ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ. ಬೆಳ್ಳಂ ಬೆಳಗ್ಗೆ 3.30ರ ವೇಳೆಗೆ ನಗರದ ಸ್ಟೇಟ್ ಬ್ಯಾಂprotestಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ ಡಿ ಪಿ ಐ ಮತ್ತು ಪಿಎಫ್‌ಐ ಕಚೇರಿಗೆ ದಾಳಿ ನಡೆಸಿದ್ದರು. ಹತ್ತು ಗಂಟೆ ವೇಳೆಗೆ ದಾಳಿ ಪೂರ್ಣಗೊಂಡಿದ್ದು ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಅಲ್ಲಿಂದ ತೆರಳಿದ್ದಾರೆ.
ಇನ್ನು ಪಿಎಫ್ಐ ಮುಖಂಡರ ಮನೆಗೆ ದಾಳಿ ನಡೆಸಿ ಪಿಎಫ್ಐ ರಾಜ್ಯ ಕಾರ್ಯದರ್ಶಿ ಮಂಗಳೂರಿನ ಎಕೆ ಅಶ್ರಫ್, ಪಿಎಫ್‌ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಮೊಯಿದ್ದೀನ್ ಹಳೆಯಂಗಡಿ ಎಂಬವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಎನ್‌ಐಎ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಮಂಗಳೂರಿನಲ್ಲಿ ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ.
ಮಂಗಳೂರಿನ ಮೂರು ಕಡೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ,ದಕ ಜಿಲ್ಲೆಯ ಇತರ ಐದು ಕಡೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ. ವಿಟ್ಲ ಬಂಟ್ವಾಳದಲ್ಲಿಯೂ ಪೊಲೀಸರು ಪಿಎಫ್‌ಐ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ರಾಜಕೀಯ ಪಕ್ಷದ ಕಚೇರಿಯೊಂದಕ್ಕೆ ಈ ರೀತಿ ದಾಳಿ ನಡೆಸಿದ್ದು ಖಂಡನೀಯ,ದಾಳಿ ನಡೆಸಿದ ಸಂದರ್ಭದಲ್ಲಿ ಕಚೇರಿಯಲ್ಲಿ ದಾಖಲೆಗಳಿಗಾಗಿ ಅಧಿಕಾರಿಗಳು ಜಾಲಾಡಿದ್ದಾರೆ. ಕಚೇರಿ ಒಳಗೆ ಕಾಗದ ಪತ್ರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಚೇರಿ ಮುಂಭಾಗದ ಗಾಜು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
"NIA ಅಧಿಕಾರಿಗಳು ಬೆಳಗ್ಗೆ 3.30 ರ ವೇಳೆಗೆ ಕಚೇರಿಗೆ ಬಂದಿದ್ದಾರೆ ಎಂದು ನನಗೆ 5 ಗಂಟೆಯ ವೇಳೆಗೆ ಗೊತ್ತಾಗಿದೆ. NIA ಅಧಿಕಾರಿಗಳು ಪಿಎಫ್‌ಐ ಕಚೇರಿಗೆ ದಾಳಿ ಮಾಡುವ ಸಲುವಾಗಿ ಬಂದಿದ್ದು,ನಮ್ಮ ಕಚೇರಿಯೂ ಹತ್ತಿರದಲ್ಲಿದ್ದ ಕಾರಣ ನಮ್ಮ ಕಚೇರಿಗೂ ದಾಳಿ ಮಾಡಿದ್ದಾರೆ. ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಕಚೇರಿ ಕಟ್ಟಡದ ರೆಂಟ್ ಅಗ್ರಿಮೆಂಟ್ ಪಡೆದುಕೊಂಡು ಹೋಗಿದ್ದಾರೆ. ಕಚೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್,ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ನಮ್ಮ ಪಕ್ಷಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಅಬುಬಕ್ಕರ್ ಕುಳಾಯಿ ಮಾಹಿತಿ ನೀಡಿದ್ದಾರೆ.