ಸುರತ್ಕಲ್: ರಾತ್ರಿ ನೋಟಿಸ್ ಗೆ ಪೊಲೀಸ್ ಕಮಿಷನರ್ ವಿರುದ್ಧ ಗರಂ ಆದ 'ಪ್ರತಿಭಾ ಕುಳಾಯಿ'
Tuesday, October 18, 2022
ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟವನ್ನು ಮಾಡಬಾರದೆಂದು ಪೊಲೀಸರು ರಾತ್ರೋರಾತ್ರಿ ತಮ್ಮ ಮನೆಗೆ ಬಂದು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಇಂದು ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಗರಂ ಆಗಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ತೆರವು ನಿರ್ಣಾಯಕ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರೊಂದಿಗೆ ಪ್ರತಿಭಾ ಕುಳಾಯಿ ವಾಗ್ವಾದಕ್ಕಿಳಿದಿದ್ದಾರೆ. 'ನನಗೇನು ಕ್ರಿಮಿನಲ್ ಬ್ಯಾಗ್ರೌಂಡ್ ಇಲ್ಲ. ಆದರೆ ರಾತ್ರೋರಾತ್ರಿ ಐವರು ಪೊಲೀಸರು ಮನೆಗೆ ಬರುವ ಅಗತ್ಯವೇನಿತ್ತು. ಈ ವೇಳೆ 74 ವರ್ಷದ ನನ್ನ ಅತ್ತೆ ಒಬ್ಬರೇ ಮನೆಯಲ್ಲಿದ್ದರು. ಈ ಬಗ್ಗೆ ನಾನು ಎಸಿಪಿಯವರಿಗೆ ಕರೆ ಮಾಡಿದರೆ ಅವರು ನನ್ನ ಕರೆಯನ್ನು ಸ್ವೀಕರಿಸಿಲ್ಲ. ಆದರೆ ಪೊಲೀಸ್ ಕಮಿಷನರ್ ಆಗಿ ನೀವು ನನಗೆ ಕರೆ ಮಾಡಿ ಕೇಳಬಹುದಿತ್ತಲ್ಲ. ಈ ರೀತಿಯ ಪ್ರಕರಣ ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಆಗಿಲ್ಲ' ಎಂದು ಗರಂ ಆದರು.
ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿ ಕುಮಾರ್ ಎನ್. ಸ್ಪಷ್ಟನೆ ನೀಡಿ, 'ನಾವು ಯಾವುದೇ ಕಾರಣಕ್ಕೆ ಪೋಲೀಸರನ್ನು ರಾತ್ರಿ ವೇಳೆ ನೋಟಿಸ್ ಜಾರಿ ಮಾಡಲು ಮನೆಗೆ ಹೋಗುವಂತೆ ಹೇಳಿಲ್ಲ. ಎರಡು ಮೂರು ದಿನಗಳ ಹಿಂದೆ ನೋಟಿಸ್ ಜಾರಿ ಮಾಡುವಂತೆ ಹೇಳಿದ್ದೆ. ಆದರೆ ತಡವಾಯಿತೆಂದು ಪೊಲೀಸರು ರಾತ್ರಿ ವೇಳೆ ಬಂದಿದ್ದಾರೆ. ಆದರೆ ಯಾರು ಪೊಲೀಸರು ಮನೆಗೆ ಬಂದಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.