ಸುರತ್ಕಲ್: ಖಾಸಗಿ ಮಾಹಿತಿ ಬಹಿರಂಗಗೊಳಿಸುವ ಬೆದರಿಕೆ;ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಬಂಧನ
Wednesday, December 14, 2022
ಸುರತ್ಕಲ್: ಉದ್ಯಮಿಯೊಬ್ಬರ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಮಾಡುವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್(42)ನನ್ನು ಸುರತ್ಕಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾಜೇಶ್ ಪವಿತ್ರನ್ ಚಿನ್ನ ಹಾಗೂ ಹಣಕ್ಕಾಗಿ ತನ್ನ ಖಾಸಗಿ ಮಾಹಿತಿಯನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಿ ಸುರೇಶ್ ಎಂಬ ಉದ್ಯಮಿಯೊಬ್ಬರು ನೀಡಿರುವ ದೂರಿನನ್ವಯ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಕಾವೂರು ನಿವಾಸಿ ಸುರೇಶ್ ಅವರು ಸುರತ್ಕಲ್‌ನಲ್ಲಿ ರಾಜೇಶ್ ಪವಿತ್ರನ್ ನೊಂದಿಗೆ ಪಾಲುದಾರಿಕೆಯಲ್ಲಿ ಬ್ಯುಸಿನೆಸ್ ನಡೆಸಲು ಮುಂದಾಗಿದ್ದರು. ಆದರೆ ರಾಜೇಶ್ ಪವಿತ್ರನ್‌ನ ಕೆಲವೊಂದು ಅವ್ಯವಹಾರಗಳು ಗಮನಕ್ಕೆ ಬಂದುದರಿಂದ ಪಾಲುದಾರಿಕೆಯಿಂದ ಹೊರಬಂದಿದ್ದರು.
ಇದರಿಂದ ಆಕ್ರೋಶಿನಾದ ರಾಜೇಶ್ ಪವಿತ್ರನ್, ದೂರುದಾರ ಸುರೇಶ್ ಅವರ ಲ್ಯಾಪ್ ಟಾಪ್ ವಶಕ್ಕೆ ಪಡೆದು ಹೆಚ್ಚುವರಿ ಹಣ, ಚಿನ್ನ ನೀಡಬೇಕು. ಇಲ್ಲದಿದ್ದಲ್ಲಿ ಲ್ಯಾಪ್ ಟಾಪ್ ನಲ್ಲಿದ್ದ ಖಾಸಗಿ ಮಾಹಿತಿಯನ್ನು ಬಹಿರಂಗ ಪಡಿಸುತ್ತೇನೆ. ಅಲ್ಲದೆ ಸುರೇಶ್ ಅವರ ಕೈ, ಕಾಲು ಮುರಿಯುವುದಾಗಿ ಬೆದರಿಕೆಯೊಡ್ಡಿದ್ದಾನೆಂದು ಆರೋಪಿಸಿ ಸುರತ್ಕಲ್ ಠಾಣೆಯಲ್ಲಿ ಸುರೇಶ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡು ರಾಜೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೆ ರಾಜೇಶ್ ಪವಿತ್ರನ್ ನಿಗೆ ನೆರವು ನೀಡಿರುವ ಆರೋಪದಲ್ಲಿ ಡಾ.ಸನಿಜ ಎಂಬವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.