Mangalore: ರಂಗಸ್ಥಳದಲ್ಲಿಯೇ ಕುಸಿದುಬಿದ್ದು ಯಕ್ಷ ಕಲಾಮಾತೆಯ ಮಡಿಲು ಸೇರಿದ ಖ್ಯಾತ ಯಕ್ಷಗಾನ ಕಲಾವಿದ
Thursday, December 22, 2022
ಮಂಗಳೂರು: ಯಕ್ಷಗಾನ ಪಾತ್ರಧಾರಿಯಾಗಿ ರಂಗಸ್ಥಳದಲ್ಲಿ ಪಾತ್ರ ನಿರ್ವಹಣೆ ಮಾಡುತ್ತಿದ್ದ ಸಂಧರ್ಭದಲ್ಲಿ ಯಕ್ಷಗಾನ ಕಲಾವಿದರೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಶ್ರೀಕ್ಷೇತ್ರ ಕಟೀಲಿನ ನಡೆದಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 4ನೇ ಮೇಳದ ಗುರುವಪ್ಪ ಬಾಯಾರು (58)ಮೃತಪಟ್ಟ ಯಕ್ಷಗಾನ ಕಲಾವಿದ.
ಕಟೀಲು ಶ್ರೀ ಕ್ಷೇತ್ರದ ಸರಸ್ವತೀ ಸದನದಲ್ಲಿ ನಿನ್ನೆ ರಾತ್ರಿ 'ತ್ರಿಜನ್ಮ ಮೋಕ್ಷ' ಯಕ್ಷಗಾನ ನಡೆಯುತ್ತಿತ್ತು. ಈ ಪ್ರಸಂಗದಲ್ಲಿ ಶಿಶುಪಾಲನ ಪಾತ್ರಧಾರಿಯಾಗಿ ಗುರುಪಪ್ಪ ಬಾಯರು ಪಾತ್ರ ನಿರ್ವಹಿಸಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಯಕ್ಷಗಾನ ಮುಗಿಯುವ ಸಂದರ್ಭ. ಭೀಮನ ಪಾತ್ರಧಾರಿ ರಂಗಸ್ಥಳದಲ್ಲಿ ಭಾಗವತರ ವೀರ ರಸದ ಪದ್ಯಕ್ಕೆ ಕುಣಿಯುತ್ತಿದ್ದರು. ಈ ವೇಳೆ ಇನ್ನಿತರ ಕಲಾವಿದರ ಮಧ್ಯೆಯಿದ್ದ ಗುರುವಪ್ಪ ಬಾಯಾರು ಏಕಾಏಕಿ ಕುಸಿದು ರಂಗಸ್ಥಳದಿಂದ ಹೊರಗಡೆ ಬಿದ್ದಿದ್ದಾರೆ.
ತಕ್ಷಣ ಅವರಿಗೆ ಚಿಕಿತ್ಸೆ ನೀಡಿ ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ಕೊಡ್ಯೊಯಲಾಯಿತು.ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಟೀಲು ಮೇಳದ ಪ್ರಖ್ಯಾತ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರಧಾರಿಯಾಗಿದ್ದಾಗಲೇ ಹೃದಯಾಘಾತವಾಗಿ ಮೃತಪಟ್ಟಿದ್ದನ್ನು ಇಂದು ಯಕ್ಷ ಕಲಾ ರಸಿಕರು ನೆನಪಿಸುವಂತಾಗಿದೆ.
ಗುರುವಪ್ಪ ಬಾಯಾರು ಅವರು ಪ್ರಸಂಗಕರ್ತರೂ ಹೌದು. ಕಳೆದ ತಿರುಗಾಟದಲ್ಲಿ ಸಸಿಹಿತ್ಲು ಶ್ರೀ ಭಗವತಿ ಮೇಳದಲ್ಲಿ ಜಯಭೇರಿ ಭಾರಿಸಿದ 'ಅಷ್ಟಮಂಗಲ' ಪ್ರಸಂಗವನ್ನು ಗುರುವಪ್ಪ ಬಾಯಾರು ಅವರೇ ಬರೆದಿದ್ದರು. ಕಿರೀಟ ವೇಷಧಾರಿಯಾಗಿದ್ದ ಗುರುವಪ್ಪ ಬಾಯಾರು ಅವರು ದೇವಿಮಹಾತ್ಮೆ ಪ್ರಸಂಗದಲ್ಲಿ ಕೈಟಭ ಪಾತ್ರವನ್ನು ನಿರ್ವಹಿಸುತ್ತಿದ್ದರು.