ಮಂಗಳೂರು: "ಜೀವನ ನಡೆಸಲು ದೇವರೇ ಗತಿ" ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತ

ಮಂಗಳೂರು: "ಜೀವನ ನಡೆಸಲು ದೇವರೇ ಗತಿ" ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತ

ಮಂಗಳೂರು: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಆದರೆ ಪೂರ್ಣ ಗುಣಮುಖರಾಗದ ಅವರು ಎಲ್ಲಾ ವಿಚಾರಗಳಿಗೆ ಮನೆಯವರನ್ನೇ ಅವಲಂಬಿತರಾಗಿದ್ದಾರೆ‌. ಇತ್ತ ದುಡಿಯಲೂ ಆಗದೆ, ಅತ್ತ ರಿಕ್ಷಾವೂ ಇಲ್ಲದೆ ಇದೀಗ ಅವರು 'ತನ್ನ ಜೀವನ ನಡೆಸಲು ದೇವರೇ ಗತಿ' ಎಂದು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು... 2022ರ ನವೆಂಬರ್ 19ರಂದು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಂಕಿತ ಉಗ್ರ ಶಾರೀಕ್ ನೊಂದಿಗೆ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಕೂಡಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ.14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಅವರು ಮನೆಗೆ ಬಂದಿದ್ದಾರೆ. ಆದರೆ ಇನ್ನೂ ಪುರುಷೋತ್ತಮ ಪೂಜಾರಿಯವರು ದುಡಿಯಬೇಕೆಂದರೆ ಒಂದು ವರ್ಷವೇ ಕಳೆಯಬೇಕೆಂದು ವೈದ್ಯರು ಹೇಳಿದ್ದಾರೆ. ಅವರ ಹತ್ತಿರ ಮನೆಯವರ ಹೊರತು ಬೇರೆಯವರು ಹೋಗುವಂತಿಲ್ಲ. ಸುಟ್ಟ ಗಾಯಗಳಿಂದ ಕೈಗಳು ಬಲಹೀನಗೊಂಡಿವೆ, ಮುಖ ಕಪ್ಪಿಟ್ಟಿದೆ, ದೇಹದ ಇತರೆಡೆಗಳಲ್ಲಿ ಗಾಯಗಳಿವೆ, ಗಾಯಗಳಲ್ಲಿ ಸೋಂಕು ಉಲ್ಬಣಗೊಳ್ಳದಂತೆ ಪ್ರತ್ಯೇಕವಾಗಿ ಇರಬೇಕಾದ ಸ್ಥಿತಿಯಿದೆ. ಅವರ ದೈನಂದಿನ ಕೆಲಸಗಳಿಗೂ ಮನೆಯವರನ್ನು ಅವಲಂಬಿಸಬೇಕಾದ ಸ್ಥಿತಿಯಿದೆ.

ಮೇ 3ಕ್ಕೆ ಪುರುಷೋತ್ತಮ ಪೂಜಾರಿಯವರ ಪುತ್ರಿಯ ವಿವಾಹ ನಿಶ್ಚಯವಾಗಿದೆ. ಗುರುಬೆಳದಿಂಗಳು ಫೌಂಡೇಶನ್ ನ ಪದ್ಮರಾಜ್ ಆರ್. ಮುತುವರ್ಜಿಯಿಂದ ಇವರ ಮನೆ ರಿಪೇರಿಯಾಗುತ್ತಿದ್ದು, ನಗರದ ಉಜ್ಜೋಡಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಮದುವೆಗೆ ತಯಾರಿ ಆಗಬೇಕಿದೆ. ಮನೆ ಕೆಲಸ ಆಗಬೇಕಿದೆ. ಆದರೆ ತಾನು ಮಾತ್ರ ಯಾವುದೇ ಕೆಲಸ ಮಾಡಲಾಗದೆ ಮನೆಯಲ್ಲಿದ್ದೇನೆ. ಆಸ್ಪತ್ರೆಯ ವೆಚ್ಚವೆಲ್ಲ ನನ್ನ ಮಗಳ ಇಎಸ್ಐನಿಂದ ಭರಿಸಲಾಗಿದೆ. ಸರಕಾರದಿಂದ ನನಗೆ ಪರಿಹಾರ ಕೊಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇಷ್ಟರವರೆಗೆ ಕೆಲ ಜನಪ್ರತಿನಿಧಿಗಳು, ಕೆಲ ಸಂಘ ಸಂಸ್ಥೆಗಳು ಕೈಗೆ ಒಂದಷ್ಟು ಹಣ ಕೊಟ್ಟಿರೋದು ಬಿಟ್ಟರೆ ಸರಕಾರದಿಂದ ಬೇರೇನು ಪರಿಹಾರ ಸಿಕ್ಕಿಲ್ಲ ಎಂದು ಮೌನವಾಗುತ್ತಾರೆ. ಪುರುಷೋತ್ತಮ ಪೂಜಾರಿಯವರು ನಿಜವಾಗಿಯೂ ಸಂಕಷ್ಟದಲ್ಲಿದ್ದು, ಅವರ ಜೀವನ ನಿರ್ವಹಣೆಗೆ ನೆರವಿನ ಅಗತ್ಯವಿದೆ‌.



Ads on article

Advertise in articles 1

advertising articles 2

Advertise under the article