ಮಂಗಳೂರು: ಉದ್ಯಮಿ ಕೊಲೆ ಆರೋಪಿಯ ಬಂಧನ ಆಗದಿರುವುದನ್ನು ಪ್ರಶ್ನಿಸಿ ಪೊಲೀಸ್ ಕಮಿಷನರ್ ಗೆ ಸಮನ್ಸ್
Tuesday, January 31, 2023
ಮಂಗಳೂರು: ಸುಳ್ಯ ಮೂಲದ ಉದ್ಯಮಿ ಅಬ್ದುಲ್ ಲತೀಫ್ ಎಂಬವರ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಇನ್ನೂ ಬಂಧಿಸದ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಎಸ್ಎಚ್‌ಒ ಅವರಿಗೆ ರಾಜ್ಯ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಬಂಧನ ವಿಳಂಬದ ಬಗ್ಗೆ ಫೆ.13ರೊಳಗೆ ವರದಿ ಒಪ್ಪಿಸುವಂತೆ ಹೈಕೋರ್ಟ್ ಸೂಚಿಸಿದೆ.
ಮುಲ್ಕಿಯ ಬ್ಯಾಂಕೊಂದರ ಮುಂದೆ 2020ರ ಜೂನ್ 5, 2020ರಂದು ಉದ್ಯಮಿ ಅಬ್ದುಲ್ ಲತೀಫ್ ರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 10 ಮಂದಿ ಆರೋಪಿಗಳ ಪೈಕಿ ಈಗಾಗಲೇ 9 ಮಂದಿಯ ಬಂಧನವಾಗಿದೆ. ಇನ್ನೂ ಓರ್ವ ಆರೋಪಿಯ ಬಂಧನವಾಗದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ನಗರ ಪೊಲೀಸ್ ಆಯುಕ್ತರು, ಮುಲ್ಕಿ ಎಸ್‌ಎಚ್‌ಒ ವಿರುದ್ಧ ಹೈಕೋರ್ಟ್‌ನಲ್ಲಿ ಇಮ್ರಾನ್ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಆರೋಪಿ ಪಕ್ಷಿಕೆರೆ ನಿವಾಸಿ ಮುಸ್ತಫಾನಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅದನ್ನು ರದ್ದುಪಡಿಸುವಂತೆ ಹತ್ಯೆಯಾಗಿರುವ ಅಬ್ದುಲ್ ಲತೀಫ್ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಸ್ತಫಾನ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಇನ್ನೂ ಆತನನ್ನು ಬಂಧಿಸದ ಹಿನ್ನೆಲೆಯಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಆದ್ದರಿಂದ ಫೆ.13ರೊಳಗೆ ಈ ಬಗ್ಗೆ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.