Mangalore: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಖ್ಯಾತ ಯೂಟ್ಯೂಬರ್ ಬಂಧನ ;ಇಬ್ಬರ ಬಲಿ ಪಡೆದ ಆರೋಪಿಗೆ ಸ್ಟೇಷನ್ ಬೇಲ್ !
Saturday, February 4, 2023
ಮಂಗಳೂರು ಫೆ 4: ಹಳೆಯಂಗಡಿ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮಂಗಳವಾರ ಮಧ್ಯರಾತ್ರಿ ಹಿಟ್ ಆಂಡ್ ರನ್ ಗೆ ಇಬ್ಬರು ಬಲಿಯಾದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 'ಮ್ಯಾಡ್ ಇನ್ ಕುಡ್ಲ' ಹೆಸರಿನ ಯೂಟ್ಯೂಬರ್ ಹಳೆಯಂಗಡಿ ಇಂದಿರಾ ನಗರ ನಿವಾಸಿ ಅರ್ಪಿತ್ (35) ಎಂದು ಗುರುತಿಸಲಾಗಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆ ಪೊಲೀಸರು ಕಾರು ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದು ಆತ ಜಾಮೀನು ಪಡೆದಿರುವ ಮಾಹಿತಿ ಲಭಿಸಿದೆ.
ಮೊನ್ನೆ ಮಂಗಳವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಮಧ್ಯಪ್ರದೇಶದಿಂದ ಕೇರಳ ಕಡೆಗೆ ತೆರಳುತ್ತಿದ್ದ ಲಾರಿ ಮೂಲ್ಕಿ ಬಳಿಯ ಪಡು ಪಣಂಬೂರಿನಲ್ಲಿ ಟೈರ್ ಪಂಕ್ಚರ್ ಆಗಿತ್ತು. ಹೆದ್ದಾರಿ ಬದಿ ಲಾರಿಯನ್ನು ನಿಲ್ಲಿಸಿ ಟೈರ್ ಚೇಂಜ್ ಮಾಡುತ್ತಿದ್ದಾಗ ಆರೋಪಿ ಅರ್ಪಿತ್ ಚಲಾಯಿಸ್ತಿದ್ದ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ತೀರಾ ಎಡಗಡೆಗೆ ಬಂದು ಅಲ್ಲಿದ್ದವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಮಧ್ಯಪ್ರದೇಶ ಮೂಲದ ಬಬ್ದು (23) ಮತ್ತು ಅಚಲ್ ಸಿಂಗ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತರ ಶವದ ಭಾಗಗಳು ಹೆದ್ದಾರಿ ತುಂಬಾ ಚೆಲ್ಲಾಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಘಟನೆಯಲ್ಲಿ ಕೇರಳ ನಿವಾಸಿ ಅನೀಶ್(42) ಗಂಭೀರ ಗಾಯಗೊಂಡಿದ್ದರು.