ಮಂಗಳೂರು: ಅಪ್ರಾಪ್ತ ಮಲಮಗಳನ್ನೇ ಅತ್ಯಾಚಾರ ಗೈದ ಆರೋಪಿಗೆ 20ವರ್ಷ ಕಾರಾಗೃಹ ಶಿಕ್ಷೆ
Wednesday, June 21, 2023
ಮಂಗಳೂರು: ಅಪ್ರಾಪ್ತ ಮಲಮಗಳ ಮೇಳೆ ಅತ್ಯಾಚಾರಗೈದ ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೊಕ್ಸೊ ನ್ಯಾಯಾಲಯ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಆರೋಪಿ ಅಶ್ವತ್ಥ್ ಮಲ್ಲಿಕಾ ಎಂಬವರ ಎರಡನೇ ಪತಿಯಾಗಿದ್ದು, ಆಕೆ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಜುಲೈ 26ರಂದು ನಸುಕಿನ ವೇಳೆ 3.30ರ ವೇಳೆಗೆ ಅಶ್ವತ್ಥ್ ಪತ್ನಿಯ ಮೊದಲನೆಯ ಪತಿಯ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಗೈದಿದ್ದಾನೆ. ಅಲ್ಲದೆ ಯಾರಲ್ಲಾದರೂ ತಿಳಿಸಿದರೆ ಬಾಲಕಿಯನ್ನು ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದ. ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ದೊಡ್ಡಮ್ಮನಲ್ಲಿ ತಿಳಿಸಿದ್ದಾರೆ. ಅವರು ತಕ್ಷಣ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಎಫ್ಎಸ್ಎಲ್ ವರದಿಯನ್ವಯ ಆರೋಪಿ ಅಶ್ವತ್ಥ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ವಿಶೇಷ ಪೊಕ್ಸೊ ನ್ಯಾಯಾಲಯ ಆರೋಪಿ ಅಶ್ವತ್ಥ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.