ಮಂಗಳೂರು: ಮತ್ತೆ ವಿವಾದದ ಸುತ್ತ ಮಂಗಳೂರು ವಿವಿ ಕಾಲೇಜು - ಹಿಂದೂ ಮುಖಂಡನಿಗೆ ಆತಿಥ್ಯಕ್ಕೆ ಅಪಸ್ವರ
Thursday, June 22, 2023
ಮಂಗಳೂರು: ಹಿಜಾಬ್ ವಿವಾದ ಭುಗಿಲೆದ್ದ ಮಂಗಳೂರು ವಿವಿ ಕಾಲೇಜಿನಲ್ಲಿ ಮತ್ತೊಂದು ವಿವಾದವೆದ್ದಿದೆ. ವಿವಿ ಕಾಲೇಜು ಕಾರ್ಯಕ್ರಮವೊಂದಕ್ಕೆ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿಯವರಿಗೆ ಅತಿಥಿಯಾಗಿ ಕರೆದಿರುವ ಹಿನ್ನೆಲೆಯಲ್ಲಿ ಅಪಸ್ವರ ಕೇಳಿ ಬಂದಿದೆ. ಇದೀಗ ಈ ಕಾರ್ಯಕ್ರಮಕ್ಕೆ ಹಾಗೂ ಹಿಂದೂ ಮುಖಂಡನ ಆತಿಥ್ಯಕ್ಕೆ ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ವಿವಿ ಕಾಲೇಜು ಆಡಳಿತ ಮಂಡಳಿ ಕಾರ್ಯಕ್ರಮವನ್ನು ಮುಂದೂಡಿದೆ.
ಶನಿವಾರ ಮಂಗಳೂರು ವಿವಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲು ಹಿಂದೂ ಜಾಗರಣ ವೇದಿಕೆಯ ಮುಖಂಡ, ವಾಗ್ಮಿ ಶ್ರೀಕಾಂತ್ ಶೆಟ್ಟಿಯವರಿಗೆ ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು. ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಸಂಘದಿಂದ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಈ ಆಹ್ವಾನಕ್ಕೆ ಎನ್ಎಸ್ ಯುಐ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶ್ರೀಕಾಂತ್ ಶೆಟ್ಟಿಯವರಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ನೀಡಿ ಕಾಲೇಜಿನಲ್ಲಿ ಕೋಮುವಿಷ ಬೀಜ ಬಿತ್ತುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಯಾವುದೇ ಕಾರಣಕ್ಕೆ ಕಾರ್ಯಕ್ರಮ ನಡೆಯಲು ಬಿಡೋಲ್ಲ ಎಂದು ಎಬಿವಿಪಿಗೆ ಎಚ್ಚರಿಕೆ ನೀಡಿರುವ ಎನ್ಎಸ್ ಯುಐ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಶ್ರೀಕಾಂತ್ ಶೆಟ್ಟಿಯವರು ಅತಿಥಿಯಾಗಿ ಬಂದಲ್ಲಿ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದೆ. ಆದ್ದರಿಂದ ಕಾಲೇಜು ಆಡಳಿತ ಮಂಡಳಿ ಕಾರ್ಯಕ್ರಮವನ್ನು ಮುಂದೂಡಿದೆ.