ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ ಕಾಳಗದಲ್ಲಿ ಅಸುನೀಗಿದ ಹೆಣ್ಣು ಹುಲಿ 'ನೇತ್ರಾವತಿ'

ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ ಕಾಳಗದಲ್ಲಿ ಅಸುನೀಗಿದ ಹೆಣ್ಣು ಹುಲಿ 'ನೇತ್ರಾವತಿ'



ಮಂಗಳೂರು: ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳೆರಡರ ನಡುವೆ ನಡೆದ  ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 15 ವರ್ಷದ 'ನೇತ್ರಾವತಿ' ಎಂಬ ಹುಲಿ ಜೂ.7ರಂದು ಬೆಳಗ್ಗೆ ಅಸುನೀಗಿದೆ.

ಜೂನ್‌ 6ರಂದು ರೇವಾ ಎಂಬ 6ರ ಪ್ರಾಯದ ಗಂಡು ಹುಲಿ ಹಾಗೂ ನೇತ್ರಾವತಿಯ ಮಧ್ಯೆ ನಡೆದ ಕಾಳಗದಲ್ಲಿ ನೇತ್ರಾವತಿ ಗಂಭೀರವಾಗಿ ಗಾಯಗೊಂಡಿತ್ತು. 'ರೇವಾ' ಗಂಡು ಹುಲಿಯು ಬೆದೆಗೆ ಬಂದಿದ್ದು, ನೇತ್ರಾವತಿಯ ಸಂಪರ್ಕಕ್ಕೆ ಬಂದಿತ್ತು. ಈ ವೇಳೆ ಹೆಣ್ಣು ಹುಲಿಯು ರೇವಾನ ಮೇಲೆರಗಿದೆ. ಪರಿಣಾಮ ಎರಡೂ ಹುಲಿಗಳ ನಡುವೆ ಕಾಳಗವೇರ್ಪಟ್ಟಿದೆ. ಈ ಕಚ್ಚಾಟವನ್ನು ಸ್ಥಳದಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಹತೋಟಿಗೆ ತಂದು ತಕ್ಷಣ ಗಂಡು ಹುಲಿಯನ್ನು ಗೂಡಿನ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಕ್ಷಣ ಪಿಲಿಕುಳದ ವೈದ್ಯಾಧಿಕಾರಿ, ವೈಜ್ಞಾನಿಕ ಅಧಿಕಾರಿಗಳು ನೇತ್ರಾವತಿ ಹುಲಿಗೆ ಶುಶ್ರೂಷೆ ನಡೆಸಿದ್ದಾರೆ‌. ಪರಿಣಾಮ ಅದು ಸಹಜ ಸ್ಥಿತಿಗೆ ಮರಳುತ್ತಿತ್ತು. ನೀರು ಮತ್ತು ಆಹಾರ ಸೇವಿಸುತಿತ್ತು. ಆದರೆ ಇಂದು ಬೆಳಗ್ಗೆ ವೈದ್ಯಾಧಿಕಾರಿ ಶುಶ್ರೂಷೆ ನಿಡುತ್ತಿರುವಾಗಲೇ ಕುಸಿದು ಬಿದ್ದು ಅಸುನೀಗಿದೆ. ಮೇಲ್ನೋಟಕ್ಕೆ ಹುಲಿಯ ದೇಹದಲ್ಲಿ ಗಾಯಗಳಿದ್ದು, ಹೋರಾಟದ ತೀವ್ರತೆಯಿಂದ ಹೃದಯಾಘಾತವಾಗಿರುವ ಸಂಭವದಿಂದ ಈ ಮರಣ ಸಂಭವಿಸಿರಬಹುದೆಂದು ಅಭಿಪ್ರಾಯಪಡಲಾಗಿದೆ. ಆಂತರಿಕ ಗಾಯ ಮತ್ತು ಕಾರಣಗಳನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಾಗುವುದು. ರೇವಾನಿಗೆ ಸಣ್ಣಪುಟ್ಟ ಗಾಯಗಳಗಿದ್ದು ಅಪಾಯದಿಂದ ಪಾರಾಗಿದೆ. ಪಿಲಿಕುಳದಲ್ಲಿ ಸದ್ಯ 8 ಹುಲಿಗಳಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್‌. ಜಯಪ್ರಕಾಶ ಭಂಡಾರಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article