ಮಂಗಳೂರು: ಮಾರಕಾಯುಧದಿಂದ ವ್ಯಕ್ತಿಯನ್ನು ಕಡಿದು ಕೊಲೆಗೈದ ಕೊಲೆಗಡುಕ ಅರೆಸ್ಟ್
Tuesday, August 22, 2023
ಮಂಗಳೂರು: ನಗರದ ಬೈಕಂಪಾಡಿಯ ಎಪಿಎಂಸಿಯ ಹಿಂಭಾಗದ ಹಳೆಯ ಹರಾಜು ಕಟ್ಟಡದೊಳಗೆ ವ್ಯಕ್ತಿಯೊಬ್ಬರನ್ನು ಮಾರಕಾಯುಧದಿಂದ ಕಡಿದು ಕೊಲೆ ಮಾಡಿದ ಕೊಲೆಗಡುಕನನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರು, ಮೂನುತೋಟಿಯಿಲ್, ಕುಡಿಯಾನ್ ಮಲ ಮೂಲದ ಮನು ಸೆಬಾಸ್ಟಿಯನ್(33) ಬಂಧಿತ ಆರೋಪಿ.
ಆಗಸ್ಟ್ 17ರಂದು ರಾತ್ರಿ 11:30 ರಿಂದ ಆ.18ರ ಮುಂಜಾನೆ ವೇಳೆಯ ನಡುವೆ ಈ ಕೊಲೆ ನಡೆದಿತ್ತು. ಮಂಗಳೂರಿನ ಬೈಕಂಪಾಡಿಯ ಎಪಿಎಂಸಿ ಕಟ್ಟಡದ ವಾಣಿಜ್ಯ ಮಳಿಗೆಯ ಹಿಂಭಾಗದ ಹಳೆಯ ಹರಾಜು ಕಟ್ಟಡದೊಳಗಡೆ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ಆಗಸ್ಟ್ 18ರಂದು ಪತ್ತೆಯಾಗಿತ್ತು. ಮಾರಕಾಯುಧಗಳಿಂದ ಗಾಯಗೊಂಡು ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿದಾಗ ಮನು ಸೆಬಾಸ್ಟಿಯನ್ ಆರೋಪಿಯೆಂದು ತಿಳಿದು ಬಂದಿದೆ. ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.