ಮಂಗಳೂರು: ಅನ್ಯಕೋಮಿನ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ: ಇಬ್ಬರು ಬಜರಂಗದಳ ಕಾರ್ಯಕರ್ತರು ಅರೆಸ್ಟ್
Monday, November 27, 2023
ಮಂಗಳೂರು: ನಗರದ ಮೋರ್ಗನ್ಸ್ ಗೇಟ್ ಬಳಿಯ ಮಂಕಿ ಸ್ಟಾಂಡ್ ನಲ್ಲಿ ಜೊತೆಯಾಗಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಅನ್ಯಕೋಮಿನ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಬಜರಂಗದಳ ಕಾರ್ಯಕರ್ತರನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಕ್ಷಯ್ ರಾವ್ ಹಾಗೂ ಶಿಬಿನ್ ಪಡಿಕ್ಕಲ್ ಬಂಧಿತ ಆರೋಪಿಗಳು.
ಸೋಮವಾರ ರಾತ್ರಿ 8ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಪಾಂಡೇಶ್ವರ ನಿವಾಸಿ ನೂರುಲ್ ಅಮೀನ್ ಮುಳಿಹಿತ್ಲು ಬಳಿ ಸ್ಪೋರ್ಟ್ಸ್ ಅಂಗಡಿಯಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರಿನ ಹಿಂದೂ ಯುವತಿಯೊಂದಿಗೆ ಮೊಬೈಲ್ ರಿಪೇರಿ ಮಾಡಿಸಿ ಮಿಲಾಗ್ರಿಸ್ ಚರ್ಚ್ ಕಡೆಯಿಂದ ಭಗಿನಿ ಸಮಾಜದತ್ತ ಸ್ಕೂಟರ್ ನಲ್ಲಿ ಬರುತ್ತಿದ್ದ. ಸ್ಕೂಟರ್ ನಲ್ಲಿ ಬರುತ್ತಿರುವುದನ್ನು ಗಮನಿಸಿದ ಇಬ್ಬರು ಬಜರಂಗದಳ ಕಾರ್ಯಕರ್ತರು ಬೈಕ್ ನಲ್ಲಿ ಬೆನ್ನಟ್ಟಿದ್ದಾರೆ. ಬಳಿಕ ಸ್ಕೂಟರ್ ಅಡ್ಡ ಹಾಕಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳುತಿದ್ದಂತೆ ಮಧ್ಯ ಪ್ರವೇಶಿಸಿದ ಹೊಯ್ಸಳ ವಾಹನದ ಪೊಲೀಸರು ಗುಂಪನ್ನು ಚದುರಿಸಿ, ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ತನಿಖೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.