ನೂರಾರು ವಿಶೇಷ ಚೇತನ ಮಕ್ಕಳ ಪಾಲಿಗೆ ಬೆಳಕಾದ ಡಾ.ಧನಂಜಯ ಸರ್ಜಿ
Thursday, May 30, 2024
ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ತಮ್ಮ ಸರ್ಜಿ ಫೌಂಡೇಶನ್ ನ ಮೂಲಕ ಶಿವಮೊಗ್ಗದಲ್ಲಿ ವಿಶೇಷಚೇತನ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದಾರೆ.
ಸಾಮಾಜಿಕ ಕಳಕಳಿ ಹೊಂದಿರುವ ಡಾ.ಧನಂಜಯ ಸರ್ಜಿ 2016 ರ ಮಕ್ಕಳ ದಿನಾಚರಣೆ ಸಂದರ್ಭ 160 ವಿಶೇಷಚೇತನ ಹಾಗೂ ಅನಾಥ ಮಕ್ಕಳನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತು ಪಡೆದಿದ್ದಾರೆ. ಈ ಎಲ್ಲಾ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿರುವುದು ಸರ್ಜಿಯವರ ಮಾನವೀಯ ಮೌಲ್ಯಕ್ಕೆ ನಿದರ್ಶನ. ಸರ್ಜಿ ಇನ್‌ಸ್ಟಿಟೂಟ್ ವಿಶೇಷ ಚೇತನ ಮಕ್ಕಳ ತರಬೇತಿ ಕೇಂದ್ರ. ಇಲ್ಲಿ ಸೇರ್ಪಡೆಗೊಂಡ ಮಕ್ಕಳು ಎಲ್ಲರಂತೆ ತಿರುಗಾಡಬಲ್ಲ, ಓಡಾಡಬಲ್ಲ ಹಾಗೆ ಮಾತೂ ಆಡಬಲ್ಲ ಶಕ್ತಿಯನ್ನು ಪಡೆದಿದ್ದಾರೆ. ಈ ಸಂಸ್ಥೆ ನನ್ನಂತಹ ನೂರಾರು ಕುಟಂಬಗಳ ಬಾಳಿನ ಹೊಸ ಆಶಾಕಿರಣ ಎಂದರೆ ತಪ್ಪಿಲ್ಲ ಎನ್ನುತ್ತಾರೆ ಆ ಮಕ್ಕಳ ಹೆತ್ತವರು.
ಶಿವಮೊಗ್ಗದ ತರಂಗ ವಿಶೇಷಚೇತನ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಯಂತ್ರೋಪಕರಣ ಹಾಗೂ ಕೊಠಡಿಯನ್ನು ಸರ್ಜಿ ಫೌಂಡೇಷನ್ ವತಿಯಿಂದ ನೀಡಲಾಗಿದೆ. ರವಿ ಡಿ. ಚನ್ನಣ್ಣನವರು ಶಿವಮೊಗ್ಗದಲ್ಲಿ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ಸಂದರ್ಭ ಈ ವಿಶೇಷ ಚೇತನ ಮಕ್ಕಳ ಸಶಕ್ತರನ್ನಾಗಿಸಲು ಅರಿವು ಜಾಥಾ ಹಮ್ಮಿಕೊಳ್ಳಲಾಗಿತ್ತು.
ಒಮ್ಮೆ ಸರ್ಜಿ ವಿಶೇಷಚೇತನ ಮಕ್ಕಳ ಶಾಲೆಗೆ ರಾಜ್ಯಮಟ್ಟದ ಮಹಿಳಾ ಅಧಿಕಾರಿಯೊಬ್ಬರು ಭೇಟಿ ನೀಡಿದ್ದರು. 50 ವಿಶೇಷಚೇತನ ಮಕ್ಕಳು ಹಾಗೂ ಅಪ್ಪ, ಅಮ್ಮಂದಿರೊಂದಿಗೆ ಈ ಅಧಿಕಾರಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ ತುಮಕೂರಿನ ಮಹಿಳೆಯೊಬ್ಬರು ಗೊಳೋ ಅಂತ ಬಿಕ್ಕಿಬಿಕ್ಕಿ ಅಳಲು ಶುರು ಮಾಡಿದರು. "ನಾನು ಸತ್ತಂತಾಗಿದ್ದೇನೆ, ಸಾವು ಕಣ್ಣುಂದೆ ಬಂದಂತೆನಿಸ್ತಿದೆ, ದೇವ್ರು ನಂಗ್ಯಾಕೆ ಇಂತ ಕಷ್ಟ ಕೊಟ್ಟುಟ್ಟೆ. ನನ್ನನ್ನ ಕರ್ಕೊಸ್ವಾಮಿ..'' ಹೀಗೆ ಅವಲತ್ತು ಕೊಳ್ಳತೊಡಗಿದರು. ಹೇಳಮ್ಮಾ ಏನಾಯ್ತು, ಯಾಕಳ್ತಾ ಇದೆಯಾ? ದೇವ್ರದ್ದಾನೆ ಸುಮ್ಮನಿರಮ್ಮಾ, ನೀನೇ ಭಾಗ್ಯವಂತೆ, ದಯಮಾಡಿ ಅಳೋದನ್ನು ನಿಲ್ಲಿಸಮ್ಮಾ... ಪರಿಪರಿಯಾಗಿ ಹೇಳಿ ಆ ಮಹಿಳೆಯನ್ನು ಸಮಾಧಾನಪಡಿಸಿ ಸಮಸ್ಯೆ ಏನೆಂದು ಕೇಳಿದೆ.
''ಸಾರ್ ನನ್ ಮಗ ಬುದ್ದಿಮಾಂದ್ಯ, ಸ್ಪಷ್ಟವಾಗಿ ಓಡಾಡೋಕಾಗೋಲ್ಲ, ನಡೆಯೋಕಾಗೋಲ್ಲ, ಮಾತೂ ಸರಿ ಬರೋದಿಲ್ಲ, ಈ ನಡುವೆ ನನ್ನ ಗಂಡ, ಅತ್ತೆ, ಮಾವ ಅವರಿಂದಾನೂ ಕಿರಿಕಿರಿ. ಅವರ ಮನುಷ್ಯತ್ವ ಇಲ್ಲದ ವರ್ತನೆ ಯಿಂದ ಜಿಗುಪ್ಸೆ ಬಂದ್ದಿಟ್ಟಿದೆ. ನನ್ನ ಮಗ ಸರಿ ಆಗ್ತಾನಾ ಸಾರ್'' ಎಂದರು.
ಅದೇ ವೇಳೆ 15 ವರ್ಷದ ಡೌನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ದಿವ್ಯಾ ಎಂಬ ಬುದ್ದಿಮಾಂದ್ಯ ಬಾಲಕಿಯ ತಾಯಿಯೊಬ್ಬರು ''ಯಾಕಮ್ಮಾ ಚಿಂತೆ ಮಾಡ್ತೀರಾ, ನೀವೊಬ್ರೆ ಅಂತಹ ನೋವು ಅನುಭವಿಸುತ್ತಿಲ್ಲ, ಕಣ್ಣು, ಕೈ, ಕಾಲು ಇಲ್ಲದ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ನಮ್ಮ ಸುತ್ತಮುತ್ತ ಅದೆಷ್ಟೋ ತಾಯಂದಿರ ನೋವೂ ಇದೇ. ನನ್ನ ಮಗಳೂ ಬುದ್ಧಿಮಾಂದ್ಯಳೇ. ಆದರೆ ನಾನೆಂದೂ ಧೃತಿಗೆಟ್ಟಿಲ್ಲ, ಆ ನಿನ್ನ ಮಗು ನಿನಗೆ ಭಗವಂತ ಕೊಟ್ಟ ವರ ಅಂತಾ ಭಾವಿಸು'' ಎಂದು ಸಲಹೆ ನೀಡುತ್ತಾ ಭಾವುಕರಾದರು, ಆಗ ಅಲ್ಲಿದ್ದವರೆಲ್ಲರೂ ಸ್ತಬ್ದವಾದರು.
ಆಕೆಯ ಸ್ಪೂರ್ತಿದಾಯಕ ಮಾತಿಗೆ ತಲೆದೂಗಿಸಿದರು. ಜೀವನದ ಬಗ್ಗೆ ಬೇಸತ್ತಿದ್ದ ಮಹಿಳೆಯ ಮೊಗದಲ್ಲಿ ಭವಿಷ್ಯದ ಬದುಕಿನ ಬಗ್ಗೆ ಹೊಸ ಆಶಾಭಾವನೆಯೊಂದು ಒಡಮೂಡಿತು. ಹೌದು, ಆ ತಾಯಿಯ ಮಾತು ಮನಮುಟ್ಟಿತು. ಎಲ್ಲರ ಕಣ್ಣಂಚಲ್ಲೂ ನೀರೂರಿಸಿತ್ತು. ಒಬ್ಬ ಮಹಿಳೆ, ಮತ್ತೊಬ್ಬ ಮಹಿಳೆಯ ನೋವಿಗೆ ಸ್ಪಂದಿಸಿದ ರೀತಿ, ಮನಸ್ಥಿತಿ, ಪಾಸಿಟಿವ್ ಆಲೋಚನೆ ಇದೆಯಲ್ಲಾ ನಿಜಕ್ಕೂ ಮೆಚ್ಚಲೇಬೇಕು.
ಹುಟ್ಟಿದ ವಿಶೇಷಚೇತನ ಮಗು ಅದರ ಪೋಷಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಹಲವು ರೀತಿಯ ನೋವಿನ ದರ್ಶನಗಳು ಆಗುತ್ತವೆ. ತನ್ನ ಮನೆಯವರಿಂದಲೇ ಅವಮಾನಕ್ಕೂ ಒಳಗಾಗುತ್ತಾರೆ. ಅತ್ತೆ, ಮಾವಂದಿರು ಎಂಥ ಮಗು ಹೆತ್ತೆ ಅಂತ ಮೂದಲಿಸುವವರಾದರೆ ಬದುಕು ಇನ್ನೂ ದುರ್ಭರ. ಈ ತಾಯಿಗೆ ಅಂಥವೇ ಸಂಕಷ್ಟಗಳು!
''ನೋಡಮ್ಮ, ಈ ಶಾಲೆಗೆ ಮಗು ಬರುವ ಮೊದಲಿಗೂ, ಈಗಿನ ಸ್ಥಿತಿಗೂ ಹೇಗೆ ಅನಿಸ್ತಿದೆ" ಎಂದೆ. ಪರವಾಗಿಲ್ಲ, ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದರು. 'ಇಲ್ಲಿರೋ ಎಲ್ಲ ಮಕ್ಕಳು ಮತ್ತು ಅವರ ಪೋಷಕರನ್ನು ಗಮನಿಸಿ ನೋಡಮ್ಮ, ಮಕ್ಕಳ ಖುಷಿಯನ್ನು ಕಂಡಾಗ ಪ್ರತಿ ತಾಯಿಯ ಮುಖದಲ್ಲಿ ಮೂಡುವ ಸಂತೃಪ್ತಿಯನ್ನೂ ನೋಡು. ಅವರೆಲ್ಲ ನನ್ನ ಮಗು ವಿಶೇಷಚೇತನ ಮಗು ಅಂತ ಮಗುವಿನ ಕುರಿತ ಕಾಳಜಿ ಮರೆತರೆ, ತಮ್ಮ ಜವಾಬ್ದಾರಿ ಯಿಂದ ವಿಮುಖರಾದರೆ ಈ ಮಕ್ಕಳ ಗತಿ ಏನು? ಯಾಕೆ ಮಗು ಈ ಥರ ನಮಗೇ ಹುಟ್ಟಿತು, ಅಂತ ದುಃಖ ಪಡುತ್ತಾ ಕುಳಿತರೆ ಆ ಮಗುವಿಗೆ ಜೀವನ ಕಲ್ಪಿಸಲು ಆಗಲ್ಲ. ಧೃತಿಗೆಡದೆ ನಿಮ್ಮ ಮಗುವನ್ನು ಸ್ವತಂತ್ರ ವಾಗಿ ಜೀವಿಸಲು ತಯಾರು ಮಾಡಿ. ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಸಿಗುವ ಸೌಲಭ್ಯ ಹಾಗೂ ನಮ್ಮ ಶಾಲೆಯಲ್ಲಿ ಸಿಗುವ ತರಬೇತಿ ಬಳಸಿಕೊಂಡು ಮಗುವಿಗೆ ಧೈರ್ಯವನ್ನು ಹೆಚ್ಚು ಮಾಡುತ್ತಾ ಹೋಗಿ, ಮಗುವಿನ ಜೀವಂತಿಕೆ ಹಿಗ್ಗಿಸಿ'' ಹೀಗೇ ಒಂದಿಷ್ಟು ಧೈರ್ಯ ತುಂಬುವ ಕೆಲಸ ಸರ್ಜಿ ಶಾಲೆಯಲ್ಲಿ ನಡೆಯುತ್ತದೆ. ಆಗ ಹೆತ್ತವರ ಮನಸ್ಸು ಹಗುರಾದಂತೆ ಕಾಣಿಸಿತು.
ನಮ್ಮ ಜೊತೆ ಇದನ್ನೆಲ್ಲಾ ಗಮನಿಸುತ್ತಿದ್ದ ಆ ಮಹಿಳಾ ಅಧಿಕಾರಿ, ಮಕ್ಕಳಿಗೆ ತರಬೇತಿ ಕೊಡುವ ಜೊತೆ ಪೋಷಕರಿಗೂ ಸಿಗುವ ಸಾಂತ್ವನ ಕಂಡು ಭಾವುಕರಾದರು.
ಒಮ್ಮೆ ನೀವು ಈ ಸರ್ಜಿ ವಿಶೇಷಚೇತನ ಮಕ್ಕಳಸಂಸ್ಥೆಗೆ ಭೇಟಿ ಕೊಟ್ಟರೆ ಮಕ್ಕಳ ಆರ್ತನಾದ ಅರ್ಥವಾಗುತ್ತದೆ. ಮಾತನಾಡಲು ಹಂಬಲಿಸಿದರೂ ಆಗದ, ಬೇರೆಯವರಂತೆ ಓಡಾಡಬೇಕೆನಿಸಿದರೂ ಓಡಾಡಲಾಗದ ಹೀಗೆ ಹಲವು ವಿಶೇಷಚೇತನ ಮಕ್ಕಳ ಚಟುವಟಿಕೆಗಳನ್ನು ನೋಡಿದಾಗ ಅವರ ಯಾತನೆ ನಮಗೆ ತಿಳಿಯುತ್ತದೆ. ಎಲ್ಲ ಭಾಗ್ಯವೂ ಇದ್ದೂ ಜೀವನದಲ್ಲಿ ನೆಮ್ಮದಿ ಕಳೆದುಕೊಳ್ಳುವ ನಾವು, ಈ ವಿಶೇಷಚೇತನರ ದಯನೀಯ ಸ್ಥಿತಿ ನೋಡಿದಾಗ ನಮಗಿರುವ ಸಮಸ್ಯೆ ಏನೂ ಅಲ್ಲ, ಜೀರೋ, ನಿಮಗೆ ಯಾರಾದರೂ ವಿಶೇಷಚೇತನ ಮಕ್ಕಳ ಪೋಷಕರು ಸಿಕ್ಕರೆ, ನಿಮ್ಮ ಕುಟುಂಬಗಳಲ್ಲೇ ಅಂಥ ಮಕ್ಕಳನ್ನು ಯಾರಾದರೂ ಸಾಕುತ್ತಿದ್ದರೆ, ಅವರಿಗೆ ಮೆಚ್ಚುಗೆಯ ಮಾತನಾಡಿ, ಎಲ್ಲ ಸರಿಯಿರುವ ಮಕ್ಕಳನ್ನು ಸಾಕಲು ಸೋಲುತ್ತಿರುವ ಲಕ್ಷಾಂತರ ಜನರ ನಡುವೆ ಇಂಥ ಮಕ್ಕಳನ್ನು ಸಲಹಿ ಬೆಳೆಸುತ್ತಿರುವ ಇವರು ನಿಜವಾಗಲೂ ಹೀರೋಗಳಲ್ಲವೇ..?