ಮಂಗಳೂರು: ರಸ್ತೆಯಲ್ಲಿ ನಮಾಜ್ ಪ್ರಕರಣ - ಬಿ ರಿಪೋರ್ಟ್ ನೀಡಿದ ಪೊಲೀಸರು
Friday, May 31, 2024
ಮಂಗಳೂರು: ನಗರದ ಕಂಕನಾಡಿ ಬಳಿಯ ಮಸೀದಿಯೊಂದರ ಮುಂಭಾಗದ ರಸ್ತೆಯಲ್ಲೇ ನಮಾಜ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದರು. ಇದೀಗ ಪೊಲೀಸರು ಪ್ರಕರಣದಲ್ಲಿ ನಮಾಜ್ ಮಾಡುವವರಿಗೆ ರಸ್ತೆ ಸಂಚಾರಕ್ಕೆ ತಡೆ ಉಂಟುಮಾಡುವ ಯಾವುದೇ ಉದ್ದೇಶವಿಲ್ಲದ ಎಂದು ಹೇಳಿ ಬಿ ರಿಪೋರ್ಟ್ ನೀಡಿದ್ದಾರೆ.
ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಸುಮೋಟೊ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸ್ ನಿರೀಕ್ಷಕರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ. ಪ್ರಕರಣದ ವಿಚಾರಣೆಗೆ ಎ.ಸಿ.ಪಿ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗಿದೆ.
ರಸ್ತೆಯಲ್ಲಿ ನಮಾಜ್ ಮಾಡಿದ ಬಳಿಕ ವಿಹಿಂಪ ಮುಖಂಡ ಶರಣ್ ಪಂಪವೆಲ್ ಅವರು ತಮ್ಮ ಎಫ್ ಬಿ ಖಾತೆಯಲ್ಲಿ "ಮಂಗಳೂರಿನ ಕಂಕನಾಡಿ ಬಳಿ ಸಾರ್ವಜನಿಕರಿಗೆ ಉದ್ದೇಶ ಪೂರ್ವಕವಾಗಿ ತೊಂದರೆ ನೀಡಲು ನಡೆಸಿರುವ ನಮಾಜ್ ಗೆ ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಲಾಗಿದೆ. ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ನಮಾಜ್ ನಡೆದರೆ ಬಜರಂಗದಳ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಿ ನಿಲ್ಲಿಸುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ" ಎಂದು ಪೋಸ್ಟ್ ಮಾಡಿದ್ದರು. ಇದು ಜನರಲ್ಲಿ ದ್ವೇಷ ಭಾವನೆ ಉಂಟಾಗುವಂತೆ ಮಾಡುತ್ತದೆ. ಜೊತೆಗೆ ಕಾನೂನನ್ನು ಕೈಗೆತ್ತಿಕೊಳ್ಳುವ ಬೆದರಿಕೆ ಹಾಕಿ ಎಚ್ಚರಿಕೆಯನ್ನು ನೀಡಿ ಸಮಾಜದಲ್ಲಿ ಭಯವನ್ನುಂಟು ಮಾಡುವ ರೀತಿಯಲ್ಲಿ ಪೋಸ್ಟನ್ನು ಮಾಡಿದ್ದಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.