ತುಳು ಭಾಷೆಗೆ ಅಧಿಕೃತ ಮಾನ್ಯತೆ ; ಶಾಸಕ ಅಶೋಕ ರೈ ಪ್ರಯತ್ನಕ್ಕೆ ಅಂತೂ ಗೆಲುವು, ತುಳು ಭಾಷೆ ಬಗ್ಗೆ ನನ್ನದೂ ಒತ್ತಾಸೆ ಇದೆಯೆಂದ ಖರ್ಗೆ, ಅಧಿವೇಶನ ಮುಗಿದ ಕೂಡಲೇ ಚರ್ಚಿಸಿ ನಿರ್ಧಾರ ; ಸ್ಪೀಕರ್
Thursday, July 25, 2024
ತುಳು ಭಾಷೆಯನ್ನು ರಾಜ್ಯದಲ್ಲಿ ಅಧಿಕೃತ ಭಾಷೆಯಾಗಿ ಸ್ವೀಕರಿಸಲು ರಾಜ್ಯ ಸರಕಾರ ಅಂತೂ ಮುಂದಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಪಟ್ಟು ಬಿಡದೆ, ಮಾಡಿದ ಪ್ರಯತ್ನಕ್ಕೆ ಸ್ಪೀಕರ್ ಯುಟಿ ಖಾದರ್ ಕೂಡ ಕೈಜೋಡಿಸಿದ್ದಾರೆ.
ಮಂಗಳೂರು, ಜುಲೈ 25: ತುಳು ಭಾಷೆಯನ್ನು ರಾಜ್ಯದಲ್ಲಿ ಅಧಿಕೃತ ಭಾಷೆಯಾಗಿ ಸ್ವೀಕರಿಸಲು ರಾಜ್ಯ ಸರಕಾರ ಅಂತೂ ಮುಂದಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಪಟ್ಟು ಬಿಡದೆ, ಮಾಡಿದ ಪ್ರಯತ್ನಕ್ಕೆ ಸ್ಪೀಕರ್ ಯುಟಿ ಖಾದರ್ ಕೂಡ ಕೈಜೋಡಿಸಿದ್ದಾರೆ. ಡಾ.ಮೋಹನ್ ಆಳ್ವ ನೀಡಿರುವ ವರದಿಯನ್ನು ಆಧರಿಸಿ ತುಳು ಭಾಷೆಗೆ ಮಾನ್ಯತೆ ನೀಡುವುದಕ್ಕೆ ಅಧಿವೇಶನ ಮುಗಿದ ಕೂಡಲೇ ಚರ್ಚಿಸಿ ನಿರ್ಧರಿಸುವುದಾಗಿ ಅಧಿವೇಶನದಲ್ಲಿ ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ರೈ ಪ್ರತಿ ವಿಧಾನಸಭೆ ಅಧಿವೇಶನದಲ್ಲಿಯೂ ತುಳು ಭಾಷೆಯ ಬಗ್ಗೆ ಗಮನಸೆಳೆಯುವ ಪ್ರಸ್ತಾಪ ಮಾಡಿದ್ದರು. ಈ ಬಾರಿಯೂ ಅಧಿವೇಶನದಲ್ಲಿ ಪ್ರಸ್ತಾಪ ಎತ್ತಿದ ಅಶೋಕ ರೈ, ಬೇರೆ ರಾಜ್ಯಗಳಲ್ಲಿ ಯಾವ ರೀತಿ ಅಧಿಕೃತ ಭಾಷೆಗಳನ್ನು ಸೇರ್ಪಡೆ ಮಾಡಿದ್ದಾರೆಂದು ರಾಜ್ಯ ಸರ್ಕಾರದಿಂದ ಬರೆಯಲಾಗಿತ್ತು. ಕಾನೂನು ಇಲಾಖೆಯ ಮಾಹಿತಿಯನ್ನೂ ಪಡೆಯಲಾಗಿತ್ತು. ಇದರ ನಡುವೆ, ನಮ್ಮದೇ ಆಸಕ್ತರ ತಂಡ ತಮ್ಮದೇ ಖರ್ಚಿನಲ್ಲಿ ಪಶ್ಚಿಮ ಬಂಗಾಳ, ಬಿಹಾರಕ್ಕೆ ತೆರಳಿ ಅಧ್ಯಯನ ನಡೆಸಿ ಬಂದಿದ್ದಾರೆ. ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆ ಮಾಡುವುದಕ್ಕೆ ಹಣಕಾಸಿನ ಅಗತ್ಯ ಏನೂ ಇಲ್ಲ. ಡಾ.ಮೋಹನ ಆಳ್ವರ ವರದಿಯನ್ನು ಪರಿಗಣಿಸಿ ನಿರ್ಣಯ ಸ್ವೀಕರಿಸಿದರೆ ಸಾಕು ಎಂದು ಹೇಳಿದ್ದಾರೆ.
ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ಅವರೂ ತುಳುವಿನವರೇ ಆಗಿರುವುದರಿಂದ ಅಶೋಕ್ ರೈ ತುಳು ಭಾಷೆಯಲ್ಲೇ ನಿಮ್ಮ ಸಹಕಾರವೂ ಬೇಕು, ನೀವು ಸ್ಪೀಕರ್ ಆಗಿರುವಾಗಲೇ ತುಳು ಭಾಷೆಗೆ ಮಾನ್ಯತೆ ಸಿಗಬೇಕು ಅಧ್ಯಕ್ಷರೇ ಎಂದು ಹೇಳಿ ಅವರನ್ನು ಮಾತಿನಲ್ಲಿ ಕಟ್ಟಿಹಾಕಿದ್ದಾರೆ. ಅಶೋಕ್ ರೈ ಮಾತನಾಡುತ್ತಿದ್ದಾಗಲೇ ಧ್ವನಿಗೂಡಿಸಿದ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಪಶ್ಚಿಮ ಬಂಗಾಳದಲ್ಲಿ ಲ್ಯಾಟಿನ್ ಭಾಷೆಗೂ ಅಧಿಕೃತ ಭಾಷೆಯ ಮಾನ್ಯತೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಶೋಕ್ ರೈ ಪ್ರಸ್ತಾಪಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗೈರು ಹಾಜರಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಉತ್ತರ ನೀಡಿದ್ದಾರೆ.
ನನ್ನದೂ ಒತ್ತಾಸೆ ಇದೆಯೆಂದ ಖರ್ಗೆ;
ತುಳು ಭಾಷೆಯ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ವೈಯಕ್ತಿಕವಾಗಿ ನಾನು ಎಲ್ಕೆಜಿಯಿಂದಲೂ ತುಳು ಮಾತೃಭಾಷೆಯ ಶ್ರವಣ್ ರೈ ಎಂಬಾತನ ಜೊತೆಗೆ ಬೆಳೆದಿದ್ದೇನೆ. ಅವರ ಮನೆಗೂ ಹೋಗಿ ಬರುತ್ತಿದ್ದೆ. ಆತನ ತಾಯಿ ತುಳುವಿನಲ್ಲೇ ನಮಗೆ ಬೈಯುತ್ತಿದ್ದರು. ಹೀಗಾಗಿ ನೀವೀಗ ತುಳುವಿನಲ್ಲಿ ಏನು ಮಾತಾಡಿದ್ದೀರೋ ಅಲ್ಪಸ್ವಲ್ಪ ನನಗೂ ಅರ್ಥವಾಗಿದೆ. ತುಳುವನ್ನು ಅಧಿಕೃತ ಭಾಷೆ ಮಾಡಬೇಕು ಎಂಬ ಬಗ್ಗೆ ನನ್ನ ಒತ್ತಾಸೆಯೂ ಇದೆ. ಇಲ್ಲಾಂದ್ರೆ ನನ್ನ ಸ್ನೇಹಿತ ಮತ್ತು ಆತನ ತಾಯಿ ಬೈದುಬಿಡಬಹುದು. ಈಗಾಗಲೇ ಡಾ. ಮೋಹನ ಆಳ್ವರು ವರದಿ ನೀಡಿದ್ದು ಬೇರೆ ರಾಜ್ಯಗಳಲ್ಲಿ ಯಾವ ರೀತಿ ಮಾಡಿದ್ದಾರೆ ಎಂಬ ಬಗ್ಗೆಯೂ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಬರೆದಿದ್ದೇವೆ. ಇದಲ್ಲದೆ, ಅಶೋಕ್ ರೈ ತಿಳಿಸಿದಂತೆ ಸ್ವಂತ ಖರ್ಚಿನಲ್ಲೇ ತುಳುವರು ಬೇರೆ ರಾಜ್ಯಗಳಿಗೆ ಹೋಗಿ ಅಧ್ಯಯನ ಮಾಡಿ ಬಂದಿದ್ದಾರೆ ಎನ್ನುವುದು ಅವರ ಭಾಷಾ ಪ್ರೇಮವನ್ನು ತೋರಿಸುತ್ತದೆ. ಹೀಗಾಗಿ ಆದಷ್ಟು ಬೇಗ ಇದರ ಬಗ್ಗೆ ನಿರ್ಣಯ ಮಾಡಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಸ್ಪೀಕರ್ ಯುಟಿ ಖಾದರ್ ಅವರಿಗೆ ಕೇಳಿಕೊಂಡಿದ್ದಾರೆ.
ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿ, ನಾವು ಅಧಿವೇಶನ ಮುಗಿದ ಕೂಡಲೇ ಕರಾವಳಿಯ ಶಾಸಕರು, ತುಳು ಅಕಾಡೆಮಿ ಸದಸ್ಯರು ಸೇರಿ ಈ ಬಗ್ಗೆ ಚರ್ಚಿಸಿ ಯಾವ ರೀತಿ ಕಾನೂನು ರೂಪ ನೀಡಬಹುದು ಎನ್ನುವ ಬಗ್ಗೆ ನಿರ್ಣಯ ಮಾಡೋಣ ಎಂದು ಹೇಳಿದರು. ಇದೇ ವೇಳೆ, ಒಬ್ಬ ಶಾಸಕ ಲಂಬಾಣಿ ಭಾಷೆಗೂ ಅದೇ ರೀತಿಯ ಮಾನ್ಯತೆ ಸಿಗಬೇಕು ಎಂಬ ಪ್ರಸ್ತಾಪ ಮಾಡಿದರು. ಇದಕ್ಕುತ್ತರಿಸಿದ ಶಾಸಕ ಅಶೋಕ ರೈ, ಲಂಬಾಣಿ, ಕೊಡವ ಭಾಷೆಗೂ ಮಾನ್ಯತೆ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತುಳುವಿಗೆ ಅಕಾಡೆಮಿ ಇದೆ, ಏನೇನು ಆಗಬೇಕು ಎಂಬ ಬಗ್ಗೆ ಅಧ್ಯಯನ ಮಾಡಿ ಅಂತಿಮ ಹಂತದಲ್ಲಿದೆ, ಈಗ ತುಳು ಭಾಷೆಗೆ ಮಾನ್ಯತೆ ಸಿಗಲಿ, ಆನಂತರ ಇತರ ಭಾಷೆಗಳ ಬಗೆಗೂ ಪ್ರಕ್ರಿಯೆ ಆಗಲಿ ಎಂದರು.