ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆಗೆ ಸಿಪಿ ಯೋಗೀಶ್ವರ್ ರೆಡಿ ಚನ್ನಪಟ್ಟಣದಲ್ಲಿ ಬಂಡಾಯ ಸ್ಪರ್ಧೆಗೆ ಸಿದ್ಧತೆ, ಕುಮಾರಸ್ವಾಮಿ ತನ್ನ ಮಗನನ್ನೇ ನಿಲ್ಲಿಸಲಿ, ನೋಡೋಣ ಎಂದ ಸೈನಿಕ
Monday, October 21, 2024
ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಇಂದು ಸಂಜೆಯೇ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ. ಇದರೊಂದಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿಪಿವೈ ಸ್ವತಂತ್ರ ಸ್ಪರ್ಧೆ ಮಾಡೋದು ಖಚಿತವಾಗಿದೆ.
ಈ ನಡುವೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ನದ್ದು. ಅದರ ಬಗ್ಗೆ ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿರುವುದನ್ನು ಸಿಪಿ ಯೋಗೀಶ್ವರ್ ವಿರೋಧಿಸಿದ್ದಾರೆ. ಯಡಿಯೂರಪ್ಪ ಹೇಳಿಕೆ ಹಿಂದೆ ದುರುದ್ದೇಶ ಇದೆ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದನ್ನು ಅವರು ಹೇಳಬೇಕಾಗಿಲ್ಲ. ರಾಜ್ಯಾಧ್ಯಕ್ಷರು ಹೇಳಿಕೆ ನೀಡಿದ್ದರೆ ಒಪ್ಪುತ್ತೇನೆ. ರಾಜಕಾರಣ ಅಂದ ಮೇಲೆ ಕಾರ್ಯಕರ್ತರು, ಬೆಂಬಲಿಗರ ಮಾತಿಗೆ ಬೆಲೆ ಕೊಡಬೇಕು ಎಂದಿದ್ದಾರೆ.
'ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣೆಗೆ ಕಣಕ್ಕಿಳಿಯುವ ಸಾಧ್ಯತೆ ಬಹಳ ಕ್ಷೀಣಿಸುತ್ತಿದೆ. ಜೆಡಿಎಸ್ ಹಾಗೂ ನಾವು ಒಟ್ಟಿಗೆ ಚುನಾವಣೆ ಮಾಡಬೇಕು. ನನಗೆ ಮೊದಲಿನಿಂದಲೂ ಬಿಜೆಪಿಯಿಂದ ನಿಲ್ಲಬೇಕು ಅನ್ನೋದು ಆಶಯ. ಜೆಡಿಎಸ್‌ನಿಂದ ನಿಂತುಕೊಳ್ಳುವಂತೆ ಮಾತನಾಡಿದ್ದಾರೆ. ಆದರೆ, ಜೆಡಿಎಸ್ ಟಿಕೆಟ್‌ನಲ್ಲಿ ಹೋರಾಟ ಮಾಡಲು ನಮ್ಮ ಕಾರ್ಯಕರ್ತರು ಒಪ್ಪುತ್ತಿಲ್ಲ. ಬಹಳ ಸಾರಿ ಚಿಹ್ನೆ ಬದಲಾಯಿಸಿದ್ದು, ಪಕ್ಷಾಂತರ ಮಾಡಿದ್ದು ಆಗಿದೆ ಎಂದು ಯೋಗೀಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದನ್ನು ಆಕ್ಷೇಪಿಸಿರು ಸಿ.ಪಿ. ಯೋಗೇಶ್ವರ್, ಕುಮಾರಸ್ವಾಮಿ ನನ್ನ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಅವರು ಟಿಕೆಟ್ ಕೊಡದಿದ್ರೆ ಅವರ ಮಗನಿಗೇ ಕೊಡಲಿ. ಆದರೆ, ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದೆ ಅಂತ ಅನವಶ್ಯಕ ಆರೋಪ ಮಾಡೋದು ಬೇಡ. ನಾನು ಇಲ್ಲಿಯವರೆಗೆ ಕಾಂಗ್ರೆಸಿನ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರಿಗೆ ಅವರ ಕುಟುಂಬದವರಿಗೇ ಟಿಕೆಟ್ ಕೊಡಬೇಕು ಅಂತ ಇದೆ. ಮಗ ನಿಖಿಲ್ ಗೆ ನಿಲ್ಲಿಸಬೇಕು ಅಂತ ಕುಮಾರಸ್ವಾಮಿ ಮನಸಲ್ಲಿದೆ. ಅದಕ್ಕಾಗಿ ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರ ಮನಸಲ್ಲಿ ಆ ಭಾವನೆ ಇರುವಾಗ ಏನು ಬಲವಂತ ಮಾಡೋಕ್ಕೆ ಆಗುತ್ತೆ, ನೋಡೋಣ ಏನಾಗುತ್ತೆ ಅಂತ. ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಿ ಅಂತ ಅವರು ಮುಕ್ತವಾಗಿ ಏನೂ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದಾರೆ. ನಾನು ನನ್ನ ತಾಲ್ಲೂಕಿನ ಜನರ ಜತೆಗೂ ಇದರ ಬಗ್ಗೆ ಚರ್ಚೆ ಮಾಡಿದೆ, ಬಹಳ ಭಿನ್ನಾಭಿಪ್ರಾಯ ಬಂತು. ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನವಶ್ಯಕವಾಗಿ ಜೆಡಿಎಸ್‌ಗೆ ಹೋಗೋದು ಬೇಡ ಅಂತ ಅಭಿಪ್ರಾಯ ಬಂದಿದೆ ಎಂದು ಹೇಳಿದ್ದಾರೆ.