ಉಡುಪಿ: ಅನುಮಾನವೇ ಬಾರದಂತೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ ಪೊಲೀಸ್ ಅಧೀಕ್ಷಕ ಡಾ|ಕೆ ಅರುಣ್
Wednesday, October 16, 2024
ಉಡುಪಿ :ಪಡುತೋನ್ಸೆ ಗ್ರಾಮದಲ್ಲಿ ಸಿಕ್ಕಿಬಿದ್ದ ಬಾಂಗ್ಲಾ ಅಕ್ರಮ ವಲಸಿಗರು ಸುಮಾರು ಐದು ವರ್ಷಗಳಿಂದ ನೆಲೆಸಿದ್ದರೂ ಯಾರಿಗೂ ಲವಲೇಶದಷ್ಟೂ ಅನುಮಾನವೇ ಬಂದಿರಲಿಲ್ಲ
ಪಡುತೋನ್ಸೆ ಗ್ರಾಮದ ಕೆಮ್ಮಣ್ಣು, ನೇಜಾರು, ಹೂಡೆ ಪರಿಸರದಲ್ಲಿ ಒಡಿಶಾ, ಉತ್ತರ ಪ್ರದೇಶ ಮೊದಲಾದ ಹೊರ ರಾಜ್ಯಗಳ ಕಾರ್ಮಿಕರು ಹಲವೆಡೆ ವಾಸವಿದ್ದಾರೆ. ಹಲವು ವರ್ಷಗಳಿಂದ ಮೀನುಗಾರಿಕೆ, ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಕಾರ್ಯ ನಿರತರಾಗಿದ್ದು, ಅವರಂತೆಯೇ ಇವರೂ ಎಂದುಕೊಂಡಿದ್ದೆವು ಎನ್ನುತ್ತಾರೆ ಸ್ಥಳೀಯರೊಬ್ಬರು.
ಆರೋಪಿಗಳು ಮಲ್ಪೆ ಮತ್ತು ಉಡುಪಿ ನಗರದ ಕಟ್ಟಡ ನಿರ್ಮಾಣ ಸೈಟ್‌ಗಳಲ್ಲಿ ಗಾರೆ ಮತ್ತು ಲಪ್ಪ ಹೊಡೆಯುವ ಕೆಲಸ ಮಾಡಿಕೊಂಡಿದ್ದರು. ಬಾಡಿಗೆ ಮನೆಗಳಲ್ಲಿ ತಮ್ಮ ನಕಲಿ ಆಧಾರ್ ಕಾರ್ಡ್‌ಗಳನ್ನು ನೀಡಿ ನೆಲೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ 7 ಮಂದಿಯೂ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.
ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಲ್ಲ ಎಂದು ಕಾರ್ಮಿಕ ಇಲಾಖೆ ದೃಢಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮನೆಯ ಮಾಲಕರು, ಕಟ್ಟಡ ಮಾಲಕರು ಸೇರಿದಂತೆ ಆರೋಪಿಗಳ ಸಂಪರ್ಕದಲ್ಲಿದ್ದವರ ಹೆಚ್ಚಿನ ವಿಚಾರಣೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಕೆ. ಅರುಣ್ ತಿಳಿಸಿದ್ದಾರೆ