ಪುಡಿ ರಾಜಕಾರಣಿ ಯಾರೆಂದು ಮಲ್ಲೇಶ್ವರಂನಲ್ಲಿ ಗಲ್ಲಿ ಗಲ್ಲಿಗೆ ಗೊತ್ತಿದೆ, ಇವರ ಡಿಎನ್ಎ ಹಸಿರು ಇದ್ಯಾ, ಕೇಸರಿ ಇದ್ಯಾ ಅಂತ ಟೆಸ್ಟ್ ಮಾಡಿಸಬೇಕು ; ಬಿಕೆ ಹರಿಪ್ರಸಾದ್ ಗೆ ಹರೀಶ್ ಪೂಂಜ ತಿರುಗೇಟು
Monday, October 28, 2024
ಮಂಗಳೂರು, ಅ.28: ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವಹೇಳನ ಮಾಡಿರುವುದಕ್ಕೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ತಿರುಗೇಟು ನೀಡಿದ್ದಾರೆ. ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂ ಏರಿಯಾದ ಗಲ್ಲಿ ಗಲ್ಲಿಗೆ ಗೊತ್ತಿದೆ. ಬಿ.ಕೆ ಹರಿಪ್ರಸಾದ್ ಒಂದು ಚುನಾವಣೆ ಗೆಲ್ಲುವ ಯೋಗ್ಯತೆ ಇಲ್ಲದವರು. ಗಾಂಧಿ ಕುಟುಂಬದ ಆತ್ಮೀಯ ಎನ್ನುವುದನ್ನೇ ಬಂಡವಾಳ ಮಾಡಿಕೊಂಡು ಹಿಂಬಾಗಿಲ ರಾಜಕಾರಣ ಮಾಡ್ತಿರುವ ಹರಿಪ್ರಸಾದ್ ಅವರೇ ಪುಡಿ ರಾಜಕಾರಣಿ. ಇವರ ಡಿಎನ್ಎ ಹಸಿರು ಇದ್ಯಾ, ಕೇಸರಿ ಇದ್ಯಾ ಅಂತ ಟೆಸ್ಟ್ ಮಾಡಿಸಬೇಕು ಎಂದು ಟೀಕಿಸಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಬಳಿ ರಾಜಕಾರಣದ ಯೋಗ್ಯತೆ ಇಲ್ಲ, ಚುನಾವಣೆಯಲ್ಲಿ ಗೆಲ್ಲುವ ಅರ್ಹತೆ ಇಲ್ಲ. ಕೇಸರಿ, ಕಾವಿಯ ಬಗ್ಗೆ ಹರಿಪ್ರಸಾದ್ ಗೆ ಯಾಕೆ ಗೌರವ ಇಲ್ಲ ಅಂದ್ರೆ ಅವರ ಡಿಎನ್ ಎ ಯಲ್ಲಿ ಕೇಸರಿ ಇದ್ಯಾ, ಹಸಿರು ಇದ್ಯಾ ಅಥವಾ ಬಿಳಿ ಇದೆಯಾ ಎಂದು ನೋಡಬೇಕು. ಹಿಂದುಗಳು ರಾಮ, ಕೃಷ್ಣರ ಡಿಎನ್ಎ ಹೊಂದಿದ್ದಾರೆ. ಇವರಿಗೆ ಹಿಂದುಗಳ ಬಗ್ಗೆ, ಸನಾತನ ಧರ್ಮದ ಬಗ್ಗೆ ನಂಬಿಕೆ ಇಲ್ಲ.
ಸನಾತನ ಧರ್ಮದಲ್ಲಿ ಗುರು ಪರಂಪರೆಗೆ, ಗುರು ಮಠಕ್ಕೆ ವಿಶೇಷ ಗೌರವ ಇದೆ. ಹಿಂದುಗಳು ಗುರುಗಳೆಂದು ವಿಶೇಷ ಭಾವ ತೋರುವ ಪೇಜಾವರ ಶ್ರೀಗಳನ್ನ ನಿಂದಿಸಿ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ. ಬಿ.ಕೆ ಹರಿಪ್ರಸಾದ್ ಅವರಿಗೆ ತಾಕತ್ ಇದ್ರೆ ಮುಸಲ್ಮಾನ ಧರ್ಮ ಗುರುಗಳು, ಕ್ರೈಸ್ತ ಪಾದ್ರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾರೆಯೇ? ಎಂದು ಹರೀಶ್ ಪೂಂಜ ಪ್ರಶ್ನಿಸಿದರು.
ಹಿಂದೊಮ್ಮೆ ಅವರೇ ಹೇಳಿದ್ರು, ಹಿಂದೂ ಮತ್ತು ಮುಸಲ್ಮಾನರ ಡಿಎನ್ಎ ಒಂದೇ ಎಂದು. ಇದನ್ನ ನಾವು ಒಪ್ಪೋದಿಲ್ಲ, ಹಿಂದೂಗಳದ್ದು ರಾಮನ ಹಾಗೂ ಕೃಷ್ಣನ ಡಿಎನ್ಎ. ನಿಮ್ಮ ಡಿಎನ್ಎ ಯಾವುದು ಎಂದು ಟೆಸ್ಟ್ ಮಾಡಿಕೊಳ್ಳಿ. ಹಿಂದೂ ಡಿಎನ್ಎ ಆಗಿರ್ತಿದ್ರೆ ಹಿಂದೂ ಸ್ವಾಮೀಜಿಗಳ ಬಗ್ಗೆ ಈ ರೀತಿಯ ಹೇಳಿಕೆ ನೀಡುತ್ತಿರಲಿಲ್ಲ. ಜಾತಿ ಗಣತಿ ಬಗ್ಗೆ ಸ್ವಾಮೀಜಿಗಳ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸ್ವಾಮೀಜಿ ಎಲ್ಲ ಜಾತಿಗಳನ್ನ ಮೀರಿ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವಂಥವರು ಎಂದಿದ್ದಾರೆ ಹರೀಶ್ ಪೂಂಜ.