ಮಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂಪಾಯಿ ವಂಚನೆ; ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
Tuesday, November 26, 2024
ಮಂಗಳೂರು: ವ್ಯಕ್ತಿಯೊಬ್ಬರಿಗೆ ಸಂಚಾರ ನಿಯಮ ಉಲ್ಲಂಘನೆಯ ಎಪಿಕೆ(ಆ್ಯಂಡ್ರಾಯ್ಡ್ ಪ್ಯಾಕೇಜ್ ಕಿಟ್) ಫೈಲ್ ಕಳುಹಿಸಿ 1.31 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಹೇಗೆ?: ನವೆಂಬರ್ 24ರಂದು ರಾತ್ರಿ 8.44 ಗಂಟೆಗೆ ವ್ಯಕ್ತಿಯೊಬ್ಬರ ವಾಟ್ಸ್‌ಆ್ಯಪ್ ನಂಬರ್ಗೆ +917878422870 ನಂಬರ್ನಿಂದ ಮೆಸೇಜ್ ಬಂದಿತ್ತು. ಈ ಮೆಸೇಜ್ನಲ್ಲಿ VAHAN PARIVAHAN.apk ಎಂಬ ಫೈಲ್ ಬಂದಿದೆ. ಇದರಲ್ಲಿ KA 03 MA 0606 ಎಂಬ ವಾಹನ ಸಂಖ್ಯೆ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾಗಿರುವ ಮಾಹಿತಿ ಇತ್ತು.
ವ್ಯಕ್ತಿ ಫೈಲ್ ಡೌನ್ಲೋಡ್ ಮಾಡಿದ ಕೂಡಲೇ ಮೊಬೈಲ್ಗೆ 16 ಒಟಿಪಿಗಳು ಬಂದಿವೆ. ಹಾಗೂ ಬಂದ ಒಟಿಪಿಗಳನ್ನು ಯಾರಿಗೂ ಶೇರ್ ಮಾಡಿರಲಿಲ್ಲ. ನಂತರ ವಿವಿಧ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಇವರ ಕ್ರೆಡಿಟ್ ಕಾರ್ಡ್ ಮುಖಾಂತರ 30,400 ರೂ ಹಾಗೂ ಡೆಬಿಟ್ ಕಾರ್ಡ್ ಮುಖಾಂತರ 16,700 ಮತ್ತು 71,496 ರೂ. ವರ್ಗಾವಣೆ ಆದ ಬಗ್ಗೆ ಮೊಬೈಲ್ಗೆ ಮೆಸೇಜ್ ಬಂದಿದೆ. ಕೂಡಲೇ ತಮ್ಮ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿದ್ದಾರೆ.
ಈ ರೀತಿಯಾಗಿ ಅಪರಿಚಿತ ವ್ಯಕ್ತಿ ಆನ್ಲೈನ್ ಮೂಲಕ ವ್ಯಕ್ತಿಯ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ಇ- ಕಾಮರ್ಸ್ ಫ್ಲಾಟ್ಮಾರ್ಮ್ಗಳಲ್ಲಿ ವನ್ ಪ್ಲಸ್ ಮೊಬೈಲ್ 39,398 ರೂ., ಮೊಟೋರೊಲಾ ಎಡ್ಜ್ 32,098 ರೂ., ಏರ್ಪಾಡ್ 12,800 ರೂ. ಮತ್ತು 14,700 ರೂ ಹಾಗೂ 29,400 ರೂ. ಬೆಲೆಯ ವೋಚರ್ಗಳು ಹಾಗೂ 3,000 ರೂ ಬೆಲೆಯ ಗಿಫ್ಟ್ ವೋಚರ್ಗಳನ್ನು ರಾಹುಲ್ ಪಂಚಶೀಲ್ ವಿಹಾರ್ ಆದರ್ಶ್ ಹಾಸ್ಪೆಟಲ್ ಹತ್ತಿರ ದೆಹಲಿ ಪ್ರೆಸ್ ಎನ್ ಕ್ಲೇವ್ ಸಾಕೇತ್ ನವದೆಹಲಿ- 110017, ಮೊಬೈಲ್ ನಂಬರ್ 6232866722. ನೇ ವಿಳಾಸಕ್ಕೆ ಆರ್ಡರ್ ಮಾಡಿದ್ದಾನೆ. ಈ ರೀತಿ ಒಟ್ಟು 1,31,396 ರೂ. ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿದ್ದಾನೆ. ವಂಚಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ.