ಗಣಿ ಇಲಾಖೆಯ ಭ್ರಷ್ಟ ಅಧಿಕಾರಿ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ ; ಬೆಂಗಳೂರು, ಮಂಗಳೂರಿನಲ್ಲಿ ಅಪಾರ ಆಸ್ತಿ ಪತ್ತೆ, ಪರಿಶೀಲನೆ

ಗಣಿ ಇಲಾಖೆಯ ಭ್ರಷ್ಟ ಅಧಿಕಾರಿ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ ; ಬೆಂಗಳೂರು, ಮಂಗಳೂರಿನಲ್ಲಿ ಅಪಾರ ಆಸ್ತಿ ಪತ್ತೆ, ಪರಿಶೀಲನೆ

ಮಂಗಳೂರು, ನ.21: ಲೋಕಾಯುಕ್ತ ಅಧಿಕಾರಿಗಳು ಮತ್ತೆ ಭ್ರಷ್ಟರ ಬೇಟೆ ಆರಂಭಿಸಿದ್ದು ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಎಂಸಿ ಕೃಷ್ಣವೇಣಿ ಅವರ ಬೆಂಗಳೂರು, ಚಿಕ್ಕಬಳ್ಳಾಪುರದ ಮನೆಗಳು ಮತ್ತು ಮಂಗಳೂರಿನ ಮನೆ, ಕಚೇರಿಗೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. 

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ಎರಡು ತಿಂಗಳ ಹಿಂದಷ್ಟೇ ವರ್ಗಾವಣೆ ಆಗಿ ಮಂಗಳೂರಿಗೆ ಬಂದಿದ್ದರು. ಇವರು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗಣಿ‌ ಇಲಾಖೆ ಅಧಿಕಾರಿಯಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಕೃಷ್ಣವೇಣಿ ವಿರುದ್ಧ ದೂರು ದಾಖಲಾದ ಹಿನ್ನೆಲೆ ಈ ದಾಳಿ ನಡೆದಿದೆ. ಮಂಗಳೂರು ಲೋಕಾಯುಕ್ತ ಎಸ್​ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ. 

ಮಂಗಳೂರಿನ ವೆಲೆನ್ಸಿಯಾದ ಮನೆಗೆ ಹಾಗೂ ಮಲ್ಲಿಕಟ್ಟೆಯಲ್ಲಿರುವ ಗಣಿ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಕೃಷ್ಣವೇಣಿ ಅವರು ವೇಲೆನ್ಸಿಯಾದಲ್ಲಿ ಫ್ರೆಡ್ ರೋಸ್ ಎನ್ಕಲೇವ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಮೂರು ವಾಹನಗಳಲ್ಲಿ ಆಗಮಿಸಿದ್ದರು. 

ಬೆಂಗಳೂರಿನಲ್ಲಿ ಬಿಬಿಎಂಪಿ ನಗರ ಯೋಜನಾ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಇಲಾಖೆ ಎಸ್​​​ಪಿ ಮೋಹನ್ ಮನೆ ಮೇಲೆಯೂ ರೇಡ್​​​ ನಡೆದಿದೆ. ಕಾವೇರಿ ನೀರಾವರಿ ನಿಗಮ‌ ಎಂಡಿ ಮಹೇಶ್, ಸಂಬಂಧಿಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಹೇಶ್ ಮನೆ, ಸಂಬಂಧಿಕರ ಮನೆಗಳಿಗೆ ದಾಳಿ ನಡೆದಿದೆ.

Ads on article

Advertise in articles 1

advertising articles 2

Advertise under the article