ಬೆಂಗಳೂರು:ಕೆಲಸಕ್ಕೆ ಹೋಗು ಅಂದಿದ್ದಕ್ಕೆ ತಾಯಿಯನ್ನೇ ಕೊಲೆ ಮಾಡಿದ ಮಗ; ಪಾಪಿ ಪುತ್ರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಪೊಲೀಸರು
Friday, November 8, 2024
ಬೆಂಗಳೂರು: ಕೆಲಸಕ್ಕೆ ಹೋಗು ಅಂದಿದ್ದಕ್ಕೆ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಕಂಠೇಶ್ವರ ಬಡಾವಣೆಯಲ್ಲಿ ನಡೆದಿದ್ದು, ಪಾಪಿ ಪುತ್ರನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆಯೇಷಾ (50) ಕೊಲೆಯಾದ ಮಹಿಳೆ. ಶುಫಿಯಾನ್ (32) ಬಂಧಿತ ಆರೋಪಿ.
''ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತ ಮಹಿಳೆಯ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಆಯೇಷಾ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಮಗ ಶುಫಿಯಾನ್ ಕೆಲಸಕ್ಕೆ ಹೋಗದೆ ಓಡಾಡುತ್ತಿದ್ದ. ಕೆಲಸಕ್ಕೆ ಹೋಗುವಂತೆ ತಾಯಿ ಬುದ್ಧಿ ಹೇಳಿದರೂ ಆಕೆಯೊಂದಿಗೆ ಜಗಳವಾಡುತ್ತಿದ್ದ. ಶುಕ್ರವಾರ ಬೆಳಗ್ಗೆ ಸಹ ಇದೇ ವಿಚಾರಕ್ಕಾಗಿ ಜಗಳವಾಗಿತ್ತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಚಾಕುವಿನಿಂದ ತಾಯಿಗೆ ಇರಿದು ಹತ್ಯೆ ಮಾಡಿ ಪರಾರಿಗೆ ಯತ್ನಿಸಿದಾಗ ಸ್ಥಳೀಯರೇ ಹಿಡಿದು ತಮಗೆ ಒಪ್ಪಿಸಿರುವುದಾಗಿ'' ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.