ಮಂಗಳೂರು : ಉಳ್ಳಾಲದ ಖಾಸಗಿ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ ಪೊಲೀಸರು.
Sunday, November 17, 2024
ಮಂಗಳೂರಿನ ಉಳ್ಳಾಲದ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮೈಸೂರಿನ ಮೂವರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಉಳ್ಳಾಲ(ಮಂಗಳೂರು): ಉಳ್ಳಾಲದ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮೈಸೂರಿನ ಮೂವರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ.
ಮೈಸೂರು ಕುರುಬರಹಳ್ಳಿ ನಿವಾಸಿ ನಿಶಿತಾ ಎಂ.ಡಿ (21), ಮೈಸೂರು ರಾಮಾನುಜ ರಸ್ತೆ ಕೆ.ಆರ್. ಮೊಹಲ್ಲಾ ನಿವಾಸಿ ಪಾರ್ವತಿ ಎಸ್. (20), ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್. (21) ಸಾವನ್ನಪ್ಪಿರುವ ಯುವತಿಯರು ಎಂದು ಗುರುತಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ವಾ ಸ್ಕೊಸ್ ರೆಸಾರ್ಟ್‌ನಲ್ಲಿ ಘಟನೆ ನಡೆದಿದೆ.
ಯುವತಿಯರು ಬೀಚ್ ಪ್ರವಾಸಕ್ಕೆಂದು ಮೈಸೂರಿನಿಂದ ಉಳ್ಳಾಲಕ್ಕೆ ಶನಿವಾರ ಆಗಮಿಸಿದ್ದು, ರೆಸಾರ್ಟ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಮೂವರೂ ಈಜುಕೊಳಕ್ಕೆ ಇಳಿದಿದ್ದಾರೆ. ಇದರ ವಿಡಿಯೋ ಸೆರೆ ಹಿಡಿಯಲು ತಮ್ಮ ಮೊಬೈಲ್ ಅನ್ನು ರೆಕಾರ್ಡ್ ಮೋಡ್‌ನಲ್ಲಿಟ್ಟಿದ್ದರು. ನಂತರ ಓರ್ವ ಯುವತಿಗೆ ದಿಢೀರ್ ಅನಾರೋಗ್ಯ ಸಮಸ್ಯೆ ಉಂಟಾಗಿದ್ದು ಒದ್ದಾಡಿದ್ದಾಳೆ. ಇದಾದ ಬಳಿಕ ಉಳಿದ ಇಬ್ಬರಿಗೂ ಸಮಸ್ಯೆ ಉಂಟಾಗಿ ನರಳಾಟ ನಡೆಸಿದ್ದಾರೆ. ಯುವತಿಯರು ಈಜುಕೊಳದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಡಿಯೋ ರೆಸಾರ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ರೆಸಾರ್ಟ್ ಸ್ಥಳೀಯರಾದ ಮನೋಹರ್ ಎಂಬವರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಳ್ಳಾಲ ಪೊಲೀಸ್ ಇನ್ಸಪೆಕ್ಟರ್ ಹೆಚ್.ಎನ್.ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ತನಿಖೆ ನಡೆಯುತ್ತಿದೆ.