ಮಂಗಳೂರು :ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜೆ ; ಮಂಗಳೂರಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳ ದಿಢೀರ್ ತಪಾಸಣೆ, 200 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ, ಒಂದೂ ಪಾಸಿಟಿವ್ ಇಲ್ಲ..!

ಮಂಗಳೂರು: ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಣ ತೊಟ್ಟಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಇದೇ ಮೊದಲ ಬಾರಿಗೆ ಮೆಡಿಕಲ್, ಇಂಜಿನಿಯರಿಂಗ್ ಓದುತ್ತಿರುವ ಕೇರಳದ ವಿದ್ಯಾರ್ಥಿಗಳನ್ನು ದಿಢೀರ್ ಆಗಿ ಡ್ರಗ್ಸ್ ತಪಾಸಣೆಗೆ ಒಳಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಒಂದೇ ದಿನ 200 ಮಂದಿಯನ್ನು ತಪಾಸಣೆ ನಡೆಸಿದ್ದು ಎಲ್ಲರೂ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಮಂಗಳೂರಿನ ಮಟ್ಟಿಗೆ ದೇರಳಕಟ್ಟೆ ಡ್ರಗ್ಸ್ ಕ್ಯಾಪಿಟಲ್ ಇದ್ದಂತೆ ಎನ್ನುವ ಆರೋಪಗಳಿವೆ. ಇತ್ತೀಚೆಗೆ ಡ್ರಗ್ಸ್ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಮಂಗಳೂರು ಪೊಲೀಸರ ಸಹಯೋಗದಲ್ಲಿ ಕಾರ್ಯಾಗಾರವನ್ನೂ ಹಮ್ಮಿಕೊಂಡಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಡ್ರಗ್ಸ್ ಪೆಡ್ಲರ್ಗಳು, ಅವರಿಗೆ ಪೂರೈಕೆ ಮಾಡುತ್ತಿರುವ ಕೊಂಡಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್ ಕಮಿಷನರ್ ಅದರಲ್ಲಿ ದೊಡ್ಡ ಯಶಸ್ಸನ್ನೂ ಸಾಧಿಸಿದ್ದಾರೆ.



ಆದರೂ ಕೇರಳ ಮೂಲದ ದೇರಳಕಟ್ಟೆಯ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಆಗುತ್ತದೆ ಎನ್ನುವ ಆರೋಪಗಳಿದ್ದವು. ಈ ಹಿನ್ನೆಲೆಯಲ್ಲಿ ಸಿಇಎನ್ ಮತ್ತು ಉಳ್ಳಾಲ, ಕೊಣಾಜೆ ಠಾಣೆಯ ಪೊಲೀಸರನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ದಿಢೀರ್ ತಪಾಸಣೆ ಕೈಗೊಳ್ಳಲಾಗಿದೆ. ಕಾಲೇಜು ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಕಾಲೇಜು ಬಸ್ಗಳನ್ನೇ ತಪಾಸಣಾ ಕೇಂದ್ರಕ್ಕೆ ಒಯ್ದು ಪರೀಕ್ಷೆ ನಡೆಸಲಾಗಿದೆ.
ಕೋಣಾಜೆಯ ಪಿಎ ಇಂಜಿನಿಯರಿಂಗ್ ಕಾಲೇಜಿನ ಎರಡು ಬಸ್ ಗಳಲ್ಲಿದ್ದ 87 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದ್ದು ಎಲ್ಲರೂ ನೆಗೆಟಿವ್ ಆಗಿದ್ದಾರೆ. ಅದೇ ರೀತಿ ದೇರಳಕಟ್ಟೆಯ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ಕಣಚೂರು ಮೆಡಿಕಲ್ ಕಾಲೇಜು, ಮಂಗಳೂರಿನ ಅಲೋಶಿಯಸ್ ಕಾಲೇಜು, ಎಕ್ಕೂರು ಫಿಶರೀಸ್ ಕಾಲೇಜಿನ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಒಟ್ಟು 200 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದು ಯಾರೊಬ್ಬರೂ ಡ್ರಗ್ಸ್ ಪಾಸಿಟಿವ್ ಬರದೇ ಇರುವುದು ಮಂಗಳೂರಿನ ಮಟ್ಟಿಗೆ ಪಾಸಿಟಿವ್ ಬೆಳವಣಿಗೆಯಾಗಿದೆ.
ತಪಾಸಣೆ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷೆಗೆ ಒಳಪಡದೆ ವಿರೋಧ ವ್ಯಕ್ತಪಡಿಸಿದ್ದಾನೆ. ಉಳಿದಂತೆ, ಎಲ್ಲ ವಿದ್ಯಾರ್ಥಿಗಳು ತಪಾಸಣೆಗೆ ಸಹಕಾರ ನೀಡಿದ್ದಾರೆ. ಹೆಚ್ಚಿನವರು ಈಗ ಯಾರು ಕೂಡ ಡ್ರಗ್ಸ್ ಸೇವಿಸುತ್ತಿಲ್ಲ. ಪೊಲೀಸರು ತಪಾಸಣೆ ಮಾಡುತ್ತಾರೆಂಬ ಭಯದಲ್ಲೇ ಡ್ರಗ್ಸ್ ನಿಂದ ದೂರವಿದ್ದಾರೆಂದು ಹೇಳುತ್ತಿದ್ದರಂತೆ. ಎರಡು ತಿಂಗಳು ಹಿಂದೆ ತಪಾಸಣೆ ನಡೆಸುತ್ತಿದ್ದರೆ ಪಾಸಿಟಿವ್ ಸಿಗುತ್ತಿದ್ದರು ಎಂದು ಅವರೇ ಪೊಲೀಸರಲ್ಲಿ ಹೇಳಿಕೊಂಡಿದ್ದಾರಂತೆ.
ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿ ಡ್ರಗ್ಸ್ ವ್ಯಸನದಲ್ಲಿದ್ದಾರೆ, ಅವರೇ ಡ್ರಗ್ಸ್ ಪೆಡ್ಲರ್ ಆಗಿಯೂ ಕಾರ್ಯ ವೆಸಗುತ್ತಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಕಮಿಷನರ್ ಸೂಚನೆಯಂತೆ ಮಂಗಳೂರು ಪೊಲೀಸರು ಸಿವಿಲ್ ವಸ್ತ್ರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರು ಪೊಲೀಸ್ ಇತಿಹಾಸದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನೇರವಾಗಿ ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲಾಗಿದೆ.
ಮಂಗಳೂರಿನ ನಾಗರಿಕರು, ಜಿಲ್ಲಾಡಳಿತ, ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳ ಸಹಕಾರದಿಂದ ಡ್ರಗ್ಸ್ ಮಟ್ಟಿಗೆ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ. ಪೊಲೀಸರು ದಿಢೀರ್ ತಪಾಸಣೆ ಕೈಗೊಂಡರೂ ಯಾರೂ ಪಾಸಿಟಿವ್ ಆಗಿಲ್ಲ. ಡ್ರಗ್ಸ್ ಫ್ರೀ ಮಂಗಳೂರು ಮತ್ತು ಡ್ರಗ್ ಫ್ರೀ ಕ್ಯಾಂಪಸ್ ನಿರ್ಮಿಸುವುದಕ್ಕಾಗಿ ಈ ರೀತಿಯ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಕಳೆದ 4 ತಿಂಗಳಲ್ಲಿ ಡ್ರಗ್ಸ್ ವಿರುದ್ಧ ನಿರಂತರ ಬೇಟೆ ನಡೆದಿದ್ದು, ಪೆಡ್ಲರ್ ಗಳು ಸೇರಿದಂತೆ ಇತ್ತೀಚೆಗೆ ಅವರಿಗೆ ಪೂರೈಕೆ ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು