ಬೆಂಗಳೂರು :ಗಿಲ್ಲಿ ನಟ -ಗೃಹ ಸಚಿವ ಪರಮೇಶ್ವರ ಭೇಟಿ ಬೆನ್ನಲ್ಲೇ ಹೊಸ ವಿವಾದ...!!!

ಬೆಂಗಳೂರು :ಬಿಗ್‌ಬಾಸ್ ಕನ್ನಡ ಸೀಸನ್-12ರ ವಿಜೇತ ನಟ ಗಿಲ್ಲಿ ನಟ ಅವರು ರಾಜ್ಯದ ಗೃಹಸಚಿವರಾದ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವರು ಗಿಲ್ಲಿ ನಟ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಭವ್ಯವಾಗಿ ಸನ್ಮಾನಿಸಿದರು. ಬಿಗ್‌ಬಾಸ್ ವಿಜೇತರಾಗಿ ಹೊರಹೊಮ್ಮಿದ್ದಕ್ಕೆ ಗಿಲ್ಲಿಗೆ ಅಭಿನಂದಿಸಿದರು.
ಆದರೆ, ಬಿಗ್ ಬಾಸ್‌ನಲ್ಲಿ ಪ್ರತಿಸ್ಪರ್ಧಿಯಾಗಿದ್ದ ಅಶ್ವಿನಿ ಗೌಡ, ಧ್ರುವಂತ್ ಸೇರಿದಂತೆ ಹಲವರು ಗಿಲ್ಲಿಯ ಗೆಲುವಿಗೆ ಖುಷಿಯಾಗಿದ್ದರೂ ಬೇರೆ ಕೆಲವು ಸಂಗತಿಗಳನ್ನು ಇಟ್ಟುಕೊಂಡು ಗಮನ ಸೆಳೆದಿದ್ದಾರೆ, ಈಗ ಈ ಸಾಲಿಗೆ ‘ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ’ ಸಹ ಸೇರಿಕೊಂಡಿದೆ. ಹೌದು, ಗಿಲ್ಲಿಯ ಗೆಲುವಿನ ಸಂಗತಿಗಿಂತ ಹೆಚ್ಚಾಗಿ ಯೋಚಿಸಬೇಕಾದ ಸಂಗತಿಗಳು ಬೇಕಾದಷ್ಟಿವೆ ಎಂದು ಅಭಿಪ್ರಾಯ ಪಟ್ಟು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪೋಸ್ಟ್ ಮಾಡಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ‘ಗಿಲ್ಲಿಯ ಬಗ್ಗೆ ನಮಗೆ ಯಾವುದೇ ಬೇಜಾರಿಲ್ಲ, ಯುವಕ ಬೆಳೆಯಲಿ, ಆದರೆ ನಮ್ಮ ರಾಜ್ಯದಲ್ಲಿ ರೈತರು, ಕಾರ್ಮಿಕರು, ಆಟೋ ಚಾಲಕರು ಹೀಗೆ ಹಲವಾರು ಜನ ನ್ಯಾಯ ಸಿಗದೇ ಒದ್ದಾಡುತ್ತಿದ್ದಾರೆ ಅವರಿಗೆ ಬಿಡುವು ಮಾಡಿಕೊಂಡು ಅವರ ಕಷ್ಟ ಕೇಳಲಾಗದ ಗೃಹ ಸಚಿವರು ಬಿಗ್ ಬಾಸ್ ಮನೆಯಲ್ಲಿ ಗೆದ್ದು ಬಂದ ಗಿಲ್ಲಿಗೆ ಸಮಯ ಕೊಡುತ್ತಾರೆಂದರೆ ನಮ್ಮ ರಾಜಕೀಯ ವ್ಯವಸ್ಥೆ ಎಲ್ಲಿಗೆ ಬಂದಿದೆ..’ ಎಂಬ ಪ್ರಶ್ನೆ ಕೇಳಿದೆ.