ಗದಗ :ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್ ಹಾವು ಪ್ರತ್ಯಕ್ಷ; ಇನ್ನೊಂದಡೆ ಶಿವಲಿಂಗ ಪತ್ತೆ...!!

ಗದಗ :ಐತಿಹಾಸಿಕ ದೇಗುಲಗಳ ಗ್ರಾಮವೆಂದೇ ಪ್ರಸಿದ್ಧವಾದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತಿಹಾಸದ ಮರುಶೋಧ ಕಾರ್ಯ ಚುರುಕಿನಿಂದ ಸಾಗ್ತಿದೆ.
ಇದರ ಭಾಗವಾಗಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿಯ ಆವರಣದಲ್ಲಿ ಮೂರನೇ ದಿನದ ಉತ್ಖನನದ ವೇಳೆ ಕಾರ್ಮಿಕರು ಬೆಚ್ಚಿಬೀಳುವಂತೆ ಘಟನೆಯೊಂದು ನಡೆದಿದೆ.
ಹವದು, ನಿಧಿಯನ್ನು ಸರ್ಪ ಕಾಯುತ್ತದೆ ಎಂಬ ನಂಬಿಕೆಗೆ ಕಾಕತಾಳೀಯವೆಂಬಂತೆ ಹಾವೊಂದು ಸ್ಥಳದಲ್ಲಿ ಪ್ರತ್ಯಕ್ಷವಾಗಿರೋದು ಕೆಲಸಗಾರರನ್ನು ಭೀತಿಗೊಳಿಸಿದೆ.
ಇದೇ ವೇಳೆ, ಕೋಟೆಯ ಗೋಡೆಯಲ್ಲಿ ಪುಟ್ಟ ಶಿವಲಿಂಗವೊಂದು ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ.
ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ನಡೆಯುತ್ತಿರುವ ಪಕ್ಕದ ಜಾಗದಲ್ಲಿಯೇ ಬೃಹತ್ ಗಾತ್ರದ ಹಾವು ಕಾಣಿಸಿಕೊಂಡಿದೆ. ಹಾವು ಕಾಣಿಸಿದ ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದೆ.
ಇನ್ನು ಲಕ್ಕುಂಡಿ ಗ್ರಾಮದಲ್ಲಿಂದು ಮೂರನೇ ದಿನವೂ ಉತ್ಖನನ ಕಾರ್ಯ ಆರಂಭಗೊಂಡಿದೆ. ಉತ್ಖನನ ನಡೆಯುತ್ತಿರುವ ಜಾಗದ ಪಕ್ಕದ ಶಾಲೆಯಲ್ಲಿನ ಕಟ್ಟಡ ತೆರೆವುಗೊಳಿಸುತ್ತಿರುವ ಸಂದರ್ಭದಲ್ಲಿ ನಾಗರಾಜ ಪ್ರತ್ಯಕ್ಷವಾಗಿದ್ದಾನೆ. ಜೆಸಿಬಿ ಹಾಗೂ ಟ್ರ್ಯಾಕ್ಟರ ಚಾಲಕರ ಕಣ್ಣಿಗೆ ಹಾವು ಕಾಣಿಸಿದೆ ಎಂದು ತಿಳಿದು ಬಂದಿದೆ. ಲಕ್ಕುಂಡಿ ಗ್ರಾಮದ ಜನತಾ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಹಾವು ಕಾಣಿಸಿದೆ.
ಗ್ರಾಮದಲ್ಲಿ ಮಳೆಗಾಲದಲ್ಲಿ ಹಿಂದೆಲ್ಲ ಮಣ್ಣು ಅಗೆಯುವಾಗ ಚಿನ್ನದ ತುಂಡುಗಳು ಕಾಣಿಸುತ್ತಿದ್ದವು. ಇಲ್ಲಿ ಎಲ್ಲೇ ಅಗೆದರೂ ಬಂಗಾರ ಸಿಗುತ್ತಿತ್ತು. ಆದರೆ, ಈ ನಿಧಿ ಆಸೆಯ ಹಿಂದೆ ಹೋದವರು ರಕ್ತಕಾರಿ ಸತ್ತಿದ್ದಾರೆ ಎಂದು ಗ್ರಾಮಸ್ಥರು ಈ ಹಿಂದೆ ಹೇಳಿದ್ದರು. ನಿಧಿಯನ್ನು ಸರ್ಪ ಕಾಯುತ್ತೆ. ಹೀಗಾಗಿ ಅದರ ತಂಟೆಗೆ ಯಾರೂ ಹೋಗಬಾರದು ಎಂಬ ಅಭಿಪ್ರಾಯಗಳು ಕೆಳಿಬಂದಿದ್ದವು. ಈ ನಡುವೆ ಈಗ ಉತ್ಖನನದ ವೇಳೆ ಹಾವು ಪ್ರತ್ಯಕ್ಷವಾಗಿರೋದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಹಾವು ನೋಡಿ ಜೆಸಿಬಿ ಚಾಲಕ ಗಾಬರಿ ಆಗಿದ್ದಾನೆ. ಹೀಗಾಗಿ ಲಕ್ಕುಂಡಿ ಗ್ರಾಮಕ್ಕೆ ಏನು ಕಂಟಕ ಕಾದಿದೆಯೋ ಎನ್ನುವ ಹೆದರಿಕೆ ಶುರುವಾಗಿರೋದಾಗಿ ಗ್ರಾಮಸ್ಥರು ಭಯಭಿತರಾಗಿದ್ದಾರೆ.
ಇನ್ನು ನಿಧಿಯನ್ನು ಸರ್ಪ, ಕಾಡೆಮ್ಮೆ ಕಾಯುತ್ತದೆ ಎನ್ನುವುದು ಬರೀ ನಂಬಿಕೆ. ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಉತ್ಖನನ ಮಾಡುವ ಅಧಿಕಾರಿಗಳಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ತಿಳಿಸಿದ್ದಾರೆ. ರಕ್ತ ಕಾರಿಕೊಂಡು ಸಾಯುತ್ತಾರೆ, ಕೆಟ್ಟದಾಗುತ್ತದೆ ಇದೆಲ್ಲವೂ ನಂಬಿಕೆ ಅಷ್ಟೇ. ಕೇರಳದ ಅನಂತ ಪದ್ಮನಾಭ ದೇಗುಲದ ನಿಧಿ ವಿಚಾರದಲ್ಲೂ ದಿಗ್ಬಂಧನ ಎಂದು ಏನೂ ಇಲ್ಲ. ಬಾಕಿ ಇರುವ ಬಾಗಿಲು ತೆಗೆಯುವ ವಿಧಾನ ಗೊತ್ತಾಗಿಲ್ಲ ಅಷ್ಟೇ. ಎಲ್ಲವೂ ಕೇಳಿರುವುದು, ನಾವು ಯಾರೂ ನೋಡಿಲ್ಲ. ಹಿಂದೆ ನಿಧಿ ಹಾಗೂ ಟಂಕ ಶಾಲೆಯನ್ನು ಊರಿನ ಹೊರಗೆ ಇಡುತ್ತಿದ್ದರು. ರಾಜ್ಯದ ಮೇಲೆ ದಾಳಿಯಾದರೂ ಅವುಗಳ ರಕ್ಷಣೆಗೆ ಈ ಕ್ರಮ ಅನುಸರಿಸಲಾಗುತ್ತಿತ್ತು ಎಂದಿದ್ದಾರೆ.