ಕಡಬ: ಕಾಡುಕೋಣ ಬೇಟೆ, ಅರಣ್ಯಾಧಿಕಾರಿಗಳ ಕಂಡು ಆರೋಪಿಗಳು ಪರಾರಿ; ಮಾಂಸ, ವಾಹನ ವಶಕ್ಕೆ ;ಕಾಡುಕೋಣವನ್ನು ಗುಂಡಿಕ್ಕಿ ಬೇಟೆಯಾಡಿರುವ ಆರೋಪಿಗಳು ಅರಣ್ಯಾಧಿಕಾರಿಗಳನ್ನು ಕಂಡು ಪರಾರಿ...!!!

ಕಡಬ: ಕಾಡುಕೋಣ ಬೇಟೆ, ಅರಣ್ಯಾಧಿಕಾರಿಗಳ ಕಂಡು ಆರೋಪಿಗಳು ಪರಾರಿ; ಮಾಂಸ, ವಾಹನ ವಶಕ್ಕೆ ;ಕಾಡುಕೋಣವನ್ನು ಗುಂಡಿಕ್ಕಿ ಬೇಟೆಯಾಡಿರುವ ಆರೋಪಿಗಳು ಅರಣ್ಯಾಧಿಕಾರಿಗಳನ್ನು ಕಂಡು ಪರಾರಿ...!!!

wild-buffalo-shot-and-killed-near-aittur-in-kadaba-taluk

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಬೃಹತ್ ಗಾತ್ರದ ಕಾಡುಕೋಣವನ್ನು ಗುಂಡಿಕ್ಕಿ ಬೇಟೆಯಾಡಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಸಮಯೋಚಿತ ಕಾರ್ಯಾಚರಣೆಯಿಂದ ಬೇಟೆಗಾರರ ಚಟುವಟಿಕೆ ಪತ್ತೆಯಾಗಿದೆ.

ಐತ್ತೂರು ಗ್ರಾಮದ ಓಟೆಕಜೆ ಸಮೀಪದ ಅರ್ಬಿತೋಡು ಪ್ರದೇಶದಲ್ಲಿ ಈ ಅಕ್ರಮ ಬೇಟೆ ನಡೆದಿದೆ. ಜನವರಿ 24ರ ರಾತ್ರಿ ಬೇಟೆಗಾರರ ತಂಡ ಬಂದೂಕು ಬಳಸಿ ಕಾಡುಕೋಣವನ್ನು ಹತ್ಯೆಗೈದಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಭಾನುವಾರ (ಜನವರಿ 25) ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ, ಆರೋಪಿಗಳು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಕತ್ತರಿಸಿ ಸಾಗಿಸಲು ಸಿದ್ಧತೆ ನಡೆಸುತ್ತಿರುವುದು ಗೊತ್ತಾಗಿದೆ. ಅರಣ್ಯಾಧಿಕಾರಿಗಳನ್ನು ಕಂಡು ಆರೋಪಿಗಳು ಬೈಕ್​ ಹಾಗೂ ಮಾಂಸವನ್ನು ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಮಾಂಸ ಸುಮಾರು 8 ಕ್ವಿಂಟಾಲ್‌ಗೂ ಅಧಿಕ ಇರಬಹುದೆಂದು ಅಂದಾಜಿಸಲಾಗಿದೆ. ಬೇಟೆಗೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ಐವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಶಂಕಿತರಲ್ಲಿ ಒಬ್ಬರ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಇಲಾಖೆ ವ್ಯಾಪಕ ತನಿಖೆ ಆರಂಭಿಸಿದ್ದು, ವಿವಿಧ ಮಾರ್ಗಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, "ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡೇಟಿನಿಂದ ಪ್ರಾಣಿ ಮೃತಪಟ್ಟಿರುವುದು ದೃಢಪಟ್ಟಿದೆ. ಬೇಟೆಗೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಪ್ರಕಾರ, ಕಾಡುಕೋಣವು ಅನುಸೂಚಿ-1 (Schedule-I) ಅಡಿಯಲ್ಲಿ ಬರುವ ಅತ್ಯಂತ ಸಂರಕ್ಷಿತ ಪ್ರಾಣಿಯಾಗಿದೆ. ಇಂತಹ ಪ್ರಾಣಿಗಳನ್ನು ಬೇಟೆಯಾಡುವುದು ಜಾಮೀನು ರಹಿತ ಅಪರಾಧವಾಗಿದೆ. ಈ ಕಾಯ್ದೆಯಡಿ ದೋಷಿಗಳಿಗೆ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.

ಪ್ರಕರಣದ ಗಂಭೀರತೆಯನ್ನು ಗಮನಿಸಿ, ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಪಶುವೈದ್ಯಾಧಿಕಾರಿ ಡಾ.ಯಶಸ್ವಿ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಬ್ರಹ್ಮಣ್ಯ ಹಾಗೂ ಪಂಜ ವಲಯಗಳಲ್ಲಿ ಕಾಡುಪ್ರಾಣಿಗಳ ಅಕ್ರಮ ಬೇಟೆ ನಡೆಯುತ್ತಿರುವ ಬಗ್ಗೆ ಕಳೆದ ಕೆಲವು ತಿಂಗಳಿಂದ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿದ್ದು, ಐದು ತಿಂಗಳ ಹಿಂದೆಯೂ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಈ ಪ್ರಕರಣವನ್ನು ಅರಣ್ಯ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.



Ads on article

Advertise in articles 1

advertising articles 2

Advertise under the article