ನೇಪಾಳ: ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಅಪಘಾತ ; 13 ಮಂದಿ ಬಲಿ, 34 ಸ್ಥಿತಿ ಗಂಭೀರ...!!!

ಕಠ್ಮಂಡು : ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿರುವ ದುರ್ಘಟನೆ ಉತ್ತರಾಖಂಡದ ಗಡಿಯಲ್ಲಿರುವ ನೇಪಾಳದ ಬೈತಾಡಿ ಜಿಲ್ಲೆಯಲ್ಲಿ ಸಂಭವಿಸಿದೆ.
ಅಪಘಾತದ ವೇಳೆ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಟ್ಟು 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೈತಾಡಿ ಮತ್ತು ದಾದೇಲ್ಧುರಾದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳೀಯರು, ನೇಪಾಳ ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆಗಳು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿವೆ. ಕಂದಕದ ಆಳ ಹಾಗೂ ದುರ್ಗಮ ಪರ್ವತ ಪ್ರದೇಶ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ತಂದಿತು.
ಪ್ರಾಥಮಿಕ ತನಿಖೆಯ ಪ್ರಕಾರ, ಏರು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬಸ್‌ನ ಪ್ರೆಶರ್ ಪೈಪ್ ಒಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸಲಾಗುತ್ತಿದೆ.