ಮಂಗಳೂರು : ಮಂಗಳೂರಿನಲ್ಲಿ ಮತ್ತೊಂದು ಬ್ಲೇಡ್ ಕಂಪನಿ ; ಬಡ ವಿದ್ಯಾರ್ಥಿಗಳೇ ಟಾರ್ಗೆಟ್, 51 ಸಾವಿರ ಕಟ್ಟಲು ಹೇಳಿ ಚೈನ್ ಲಿಂಕ್ ಮೋಸ, ಚಿನ್ನ ಅಡವಿಟ್ಟು ಮೋಸ ಹೋದೆವು , ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ! ಪೊಲೀಸರದ್ದು ಮಹಾಮೌನ..!

ಮಂಗಳೂರು: ಮಂಗಳೂರು ನಗರದಲ್ಲಿ ಚೈನ್ ಲಿಂಕ್ ಹೆಸರಿನಲ್ಲಿ ಮತ್ತೊಂದು ಬ್ಲೇಡ್ ಕಂಪನಿ ಕಾರ್ಯಾಚರಿಸುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ಮೂಲದ ವೆಕ್ಸಾನ್ (VEXON) ಹೆಸರಿನ ಕಂಪನಿಯೊಂದು ನಗರದ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಮಾರ್ಕೆಟಿಂಗ್ ಉದ್ಯೋಗ ನೀಡುವುದಾಗಿ ಹೇಳಿ ನೂರಾರು ಮಂದಿಗೆ ಕೋಟ್ಯಂತರ ರೂಪಾಯಿ ಟೋಪಿ ಹಾಕಿದೆ.
ಕಂಪನಿಯಿಂದ ಹಣ ಕಳಕೊಂಡು ಮೋಸ ಹೋದ ವಿದ್ಯಾರ್ಥಿಗಳು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. ಎನ್ಎಸ್ ಯುಐ ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳ ನಾಯಕರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದು, ನಕಲಿ ಕಂಪನಿಗಳ ಬಾಗಿಲು ಹಾಕೋ ವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
‘ಜಾಲತಾಣದಲ್ಲಿ ಉದ್ಯೋಗ ಆಫರ್ ಜಾಹೀರಾತು ನೋಡಿ ಅಲ್ಲಿಗೆ ತೆರಳಿದ್ದೆ. ವೆಬ್ ಡಿಸೈನರ್, ವೆಬ್ ಡೆವಲಪರ್ ಉದ್ಯೋಗ ಇದೆಯೆಂದು ಹೇಳಿದ್ದರು. ಮೊದಲಿಗೆ ತರಬೇತಿ ಇರುತ್ತದೆ, ಇದಕ್ಕಾಗಿ ಮೂರು ದಿನ ಇಲ್ಲಿಯೇ ನಿಲ್ಲಬೇಕು, ಊಟ ವಸತಿ ಕೊಡುತ್ತೇವೆ. ಅದಕ್ಕಾಗಿ 2500 ರೂ. ನೀಡಬೇಕಾಗುತ್ತದೆ. ತರಬೇತಿ ಮುಗಿದ ಮೇಲೆ ತಿಂಗಳಿಗೆ 32 ಸಾವಿರ ಸಂಬಳಕ್ಕೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ತರಬೇತಿ ವೇಳೆ ಫುಲ್ ಬ್ರೇನ್ ವಾಷ್ ಮಾಡುತ್ತಾರೆ, ನಮ್ಮ ಮನೆಯ ಬಡತನ ಎಲ್ಲವನ್ನೂ ತಿಳಿದುಕೊಂಡು ಇಲ್ಲಿ ದುಡಿದರೆ ಕೆಲವೇ ತಿಂಗಳಲ್ಲಿ ಲಕ್ಷಾಂತರ ಸಂಪಾದನೆ ಮಾಡಬಹುದು ಎಂದು ಹೇಳಿ ಅರಮನೆ ತೋರಿಸುತ್ತಾರೆ.’


‘ಆನಂತರ, ಹನ್ನೊಂದು ಸಾವಿರ ಕಟ್ಟಲು ಹೇಳಿ ನಂಬಿಸುತ್ತಾರೆ. ಅದರಲ್ಲಿ ಮೊಬೈಲ್ ಚಾರ್ಜರ್, ಇಯರ್ ಫೋನ್ ರೀತಿಯ ಇಲೆಕ್ಟ್ರಾನಿಕ್ ಐಟಂ, ಸೀರೆ, ಕಾಸ್ಮೆಟಿಕ್ ಐಟಂ ಬರುತ್ತದೆ. ನನ್ನಲ್ಲಿ ಅಷ್ಟು ಹಣ ಇಲ್ಲ ಎಂದಾಗ, ನೀನು ಲ್ಯಾಪ್ ಟಾಪ್ ತೆಗೆದುಕೊಳ್ಳುವುದಾಗಿ ಮನೆಯಲ್ಲಿ ಹೇಳಿ ಹಣ ತೆಗೆದುಕೊಂಡು ಬಾ. ಆನಂತರ ಡಬಲ್ ಹಣ ನಿನಗೆ ಸಿಗುತ್ತದೆ ಎಂದು ನಂಬಿಸಿದರು. ಇದರಂತೆ, ತಾಯಿ ಬಳಿಯಿಂದ ಚಿನ್ನ ಅಡವಿಟ್ಟು ಹಣ ತೆಗೆದುಕೊಟ್ಟಿದ್ದೆ. ಆದರೆ ಆಮೇಲೆ ಇದೇ ರೀತಿ ಮೂವರನ್ನು ನಿನ್ನ ಗೆಳೆಯರನ್ನು ಮಾಡಿಕೊಡು. ಅಲ್ಲಿಗೆ ನಿನ್ನ ಹಣ ಬರುತ್ತದೆ ಎಂದು ಹೇಳಿದ್ದಾರೆ. ನನಗೆ ಯಾರನ್ನೂ ಅಲ್ಲಿ ಸೇರಿಸಲು ಆಗಲಿಲ್ಲ. ಆಗಲೇ ಇದು ಮೋಸದ ಜಾಲ ಎಂದು ತಿಳಿದುಬಂದಿತ್ತು. ನೂರು ರೂ.ಗೆ ಸಿಗುವ ವಸ್ತುಗಳನ್ನು ಒಂದು ಸಾವಿರಕ್ಕೆ ಕೊಡುತ್ತಿದ್ದರು. ನನಗೆ ಆ ವಸ್ತುಗಳು ಬೇಡ, ಹಣ ಕೊಡಿ ಎಂದರೂ ಕೇಳಲಿಲ್ಲ. ಕೊನೆಗೆ, ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆಂದು ಹೇಳಿದ್ದೆ. ಅಷ್ಟೊತ್ತಿಗೆ ಕದ್ರಿ ಠಾಣೆಯ 4-5 ಪೊಲೀಸರು ಕೂಡ ಅಲ್ಲಿಗೆ ಬಂದಿದ್ದರು.
‘ಮನೆಯಲ್ಲಿ ನನಗೆ ಹಣದ ಬಗ್ಗೆ ಕೇಳುತ್ತಿದ್ದರು. ಯಾರಲ್ಲೂ ನನ್ನ ನೋವು ಹೇಳಿಕೊಳ್ಳುವಂತೆ ಇರಲಿಲ್ಲ. ತೀವ್ರ ನೊಂದುಕೊಂಡು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದೆ. ಅಲ್ಲಿದ್ದಾಗಲೇ ಒಬ್ಬಳು ಗೆಳತಿಗೆ ಫೋನ್ ಮಾಡಿದ್ದು, ನೀನು ಸುಸೈಡ್ ಮಾಡಬೇಡ. ಹೋದ ಹಣ ಮರಳಿ ಬರಲ್ಲ. ಪೊಲೀಸ್ ಕಂಪ್ಲೇಂಟ್ ಮಾಡು ಎಂದು ಸಲಹೆ ಕೊಟ್ಟಳು. ತಿರುಗಿ ಅದೇ ಕಚೇರಿಗೆ ತೆರಳಿ, ನನಗೆ ಹಣ ಕೊಡಿ, ಇಲ್ಲಾಂದ್ರೆ ಇಲ್ಲಿಯೇ ಕೈ ಕೊಯ್ದುಕೊಂಡು ಸಾಯುತ್ತೇನೆಂದು ಹೆದರಿಸಿದೆ. ಬ್ಲೇಡಿನಲ್ಲಿ ಕೈಯನ್ನೂ ಕೊಯ್ದುಕೊಂಡು ರಕ್ತ ಹರಿದಿತ್ತು. ಕೊನೆಗೆ ತೀವ್ರ ಸತಾಯಿಸಿದ ಬಳಿಕ ನನ್ನ ಹಣ ಕೊಟ್ಟರು. ನಾನು ಅಲ್ಲಿ ಬಿಟ್ಟು ಬಂದು ಆರು ತಿಂಗಳಾಯ್ತು. ಆದರೆ ನನಗೆ ತಿಳಿದವರು, ಬೇರೆ ಕಾಲೇಜಿನ ವಿದ್ಯಾರ್ಥಿಗಳು ಹಲವು ಮಂದಿ ಅಲ್ಲಿದ್ದಾರೆ ಎಂದು ಸ್ವಸ್ತಿಕ್ ಸ್ಕೂಲ್ ನಲ್ಲಿ ಪದವಿ ಕಲಿಯುತ್ತಿರುವ ರಮ್ಯಾ ಎಂಬ ವಿದ್ಯಾರ್ಥಿನಿ ತನ್ನ ನೋವನ್ನು ಹೇಳಿಕೊಂಡರು.

ಇನ್ನೊಬ್ಬ ವಿದ್ಯಾರ್ಥಿನಿ ಹಸ್ತಾ ಎಂಬಾಕೆ ಮಾತನಾಡಿ, ಅಲ್ಲಿ ಈಗಲೂ 50ಕ್ಕಿಂತ ಹೆಚ್ಚು ಹಲವು ಕಾಲೇಜಿನ ವಿದ್ಯಾರ್ಥಿಗಳು ಇದ್ದಾರೆ. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನನಗೆ 51 ಸಾವಿರ ಕಟ್ಟಲು ಹೇಳಿದ್ದರು. ಅಲ್ಲಿ ತೆರಳಿದಾಗ, ಒಬ್ಬೊಬ್ಬರು ಒಂದೊಂದು ರೀತಿಯ ಕತೆಗಳನ್ನು ಹೇಳಿದರು. ತಾವು ಕೂಡ ಬಡತನದಲ್ಲಿದ್ದು ಮೇಲೆ ಬಂದಿದ್ದೇವೆ. ಸಾಲ ಮಾಡಿ ಮೊದಲ ಕಂತು ಹಣ ಕಟ್ಟಿದ್ದೆವು ಎಂದು ಹೇಳಿ ಕೂಡಲೇ ರಿಜಿಸ್ಟರ್ ಆಗಲು ಹುರಿದುಂಬಿಸಿದರು. ತರಬೇತಿ ಅಂತ ಸೇರಿದ ಕೂಡಲೇ ನಮ್ಮ ಮೊಬೈಲ್ ಪಡೆದುಕೊಳ್ಳುತ್ತಾರೆ, ಬೇರೆ ಯಾರನ್ನೂ ಸಂಪರ್ಕಿಸದಂತೆ ತಡೆಯುತ್ತಾರೆ. ಅಲ್ಲಿ ಟ್ರೈನಿಂಗ್ ಕೊಡಲು ಧಾರವಾಡ, ಬಾಗಲಕೋಟ ಮೂಲದವರಿದ್ದಾರೆ. ಅವರ ಹೆಡ್ ಮಹಾರಾಷ್ಟ್ರದವರಂತೆ. ನಾನು ಕೂಡ ಸಾಲ ಮಾಡಿ 51 ಸಾವಿರ ಕಟ್ಟಿದ್ದೇನೆ. ಮೊದಲಿಗೆ ವೆಬ್ ಡಿಸೈನರ್ ಅಂತ ಹೇಳಿ ನನ್ನನ್ನು ಸೇರಿಸಿಕೊಂಡಿದ್ದರು. ತರಬೇತಿ ಬಳಿಕ ಸಂಬಳ ಕೊಡುತ್ತೇವೆ ಎಂದಿದ್ದರು.
ಆನಂತರ, ಇಬ್ಬರನ್ನು ಇದೇ ರೀತಿ ಸೇರಿಸಿದರೆ ನಿನಗೆ 11 ಸಾವಿರದಂತೆ ರಿಟರ್ನ್ ಬರುತ್ತದೆ ಎಂದು ಹೇಳಿದ್ದಾರೆ. ಇದರಿಂದ ತೀವ್ರ ಕಸಿವಿಸಿಯಾಗಿದ್ದು, ನಂಬಿಕೆಯಿಂದ ಹಣ ಕೊಟ್ಟಾಗಿದೆ, ಏನು ಮಾಡುವುದೆಂದು ತೋಚದೆ ಸ್ವಸ್ತಿಕ್ ಸ್ಕೂಲ್ ಪ್ರಾಂಶುಪಾಲರ ಬಳಿ ಹೇಳಿದಾಗ ಪೊಲೀಸ್ ದೂರು ನೀಡಲು ಹೇಳಿದ್ದಾರೆ. ನಿನ್ನೆ ನಾವೆಲ್ಲ ಹೋಗಿ ಕದ್ರಿ ಠಾಣೆಗೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು.

ಸ್ವಸ್ತಿಕ್ ಸ್ಕೂಲ್ ವಿದ್ಯಾರ್ಥಿ ಸಂಘದ ಮತ್ತು ಎಬಿವಿಪಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾತ್ವಿಕ್ ಮುಳಿಯ ಮಾತನಾಡಿ, ಇದೊಂದು ಪಕ್ಕಾ ಬ್ಲೇಡ್ ಕಂಪನಿಯಾಗಿದ್ದು, ಮಂಗಳೂರಿನಲ್ಲಿ ಎರಡು ವರ್ಷಗಳಿಂದ ಯುವ ಜನರನ್ನು ಯಾಮಾರಿಸಿ ಸುಲಿಗೆ ಮಾಡುತ್ತಿದೆ. ಇದರಲ್ಲಿ ಶ್ರೀನಿವಾಸ, ಅಲೋಶಿಯಸ್, ಯೆನಪೋಯ ಕಾಲೇಜಿನ ವಿದ್ಯಾರ್ಥಿಗಳಿದ್ದು ಇದು ಮೋಸದ ಜಾಲವೆಂದು ನಮಗೆ ಫೋನ್ ಮಾಡಿ ಹೇಳಿದ್ದಾರೆ. ನಾವು ಪೊಲೀಸ್ ಠಾಣೆ ತೆರಳಿದಾಗ, ಕಟ್ಟಡದ ಮಾಲಕ ಕಂಪನಿ ಪರವಾಗಿ ಬಂದಿದ್ದಾರೆ. ಅಲ್ಲಿ ಅಕ್ರಮ ಆಗುತ್ತಿದ್ದರೆ, ಯುವಜನರಿಗೆ ಮೋಸ ಆಗುತ್ತಿರಬೇಕಾದರೆ 40 ಸಾವಿರ ಬಾಡಿಗೆ ಬರುತ್ತದೆ ಎಂದು ನಕಲಿ ಕಂಪನಿ ಪರ ವಕಾಲತ್ತು ಮಾಡುವುದಾ.. ಟ್ರೇಡ್ ಲೈಸನ್ಸ್ ಇದೆಯೆಂದು ಹೇಳಿ ಯಾಮಾರಿಸುತ್ತಾರೆ. ಚೈನ್ ಲಿಂಕ್ ಕಂಪನಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿದ್ಯಾರ್ಥಿ ಸಂಘಟನೆಗಳು, ಎನ್ಎಸ್ ಯುಐ ನಾವೆಲ್ಲ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಎನ್ಎಸ್ ಯುಐ ವಿದ್ಯಾರ್ಥಿ ಸಂಘಟನೆಯ ಕ್ರಿಸ್ಟನ್ ಮಿನೇಜಸ್, ಮಂಗಳೂರಿನಲ್ಲಿ ಪದೇ ಪದೇ ನಕಲಿ ಕಂಪನಿಗಳು ಬೆಳಕಿಗೆ ಬರುತ್ತಿದ್ದು, ಪೊಲೀಸರು, ಅಧಿಕಾರಿ ವರ್ಗಕ್ಕೆ ಯಾಕೆ ತಿಳಿಯುತ್ತಿಲ್ಲ. ಎರಡು ವರ್ಷದಿಂದ ಇಂತಹ ಮೋಸ ಆಗುತ್ತಿರಬೇಕಾದರೆ ಸ್ಥಳೀಯ ಪೊಲೀಸರಿಗೆ ತಿಳಿಯುತ್ತಿಲ್ಲವೇ. ಕೂಡಲೇ ಈ ಕಂಪನಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿ ಪ್ರೀತೇಶ್ ಕನೆಮರಡ್ಕ, ಸಿಂಧು ಮತ್ತಿತರರಿದ್ದರು.