ಪುಲ್ವಾಮಾ: ದಾಳಿಗೆ 7 ವರ್ಷ –40 ಯೋಧರ ಬಲಿದಾನ, ಆ ಕರಾಳ ದಿನ ನಡೆದದ್ದೇನು?

ಪುಲ್ವಾಮ: ಫೆಬ್ರವರಿ 14, 2019 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 CRPF ಸೈನಿಕರು ಹುತಾತ್ಮರಾದರು. ಈ ಭೀಕರ ಉಗ್ರ ದಾಳಿಯ 7 ವರ್ಷಗಳ ನಂತರವೂ ಆ ನೋವು ಅಚ್ಚಳಿಯದೆ ಉಳಿದಿದೆ.
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದು ಇಂದಿಗೆ (ಫೆಬ್ರವರಿ 14, 2026) ಸರಿಯಾಗಿ ಏಳು ವರ್ಷಗಳು ಕಳೆದಿವೆ. 2019ರ ಇದೇ ದಿನದಂದು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್ ನಡೆಸಿದ ಭೀಕರ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಯೋಧರು ವೀರಮರಣ ಅಪ್ಪಿದ್ದರು.
ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು ಸೇರಿದಂತೆ ಒಟ್ಟು 2547 ಸಿಆರ್‌ಪಿಎಫ್ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಆಗಲೇ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿ ಈ ಭೀಕರ ದಾಳಿ ನಡೆಯಿತು.
ಆತ್ಮಾಹುತಿ ದಾಳಿಕೋರನೊಬ್ಬ 100 ಕೆ.ಜಿ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಯೋಧರ ಬಸ್‌ಗೆ ಬಂದು ಗುದ್ದಿಸಿದ್ದ. ಈ ಸ್ಫೋಟದ ತೀವ್ರತೆಗೆ ಕಾರು ಮತ್ತು ಬಸ್ ಗುರುತೇ ಸಿಗದಂತೆ ನಜ್ಜುಗುಜ್ಜಾಗಿದ್ದವು. ಯೋಧರ ಮೃತದೇಹಗಳು 100 ಮೀಟರ್ ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಿಂದಿನಿಂದ ಬರುತ್ತಿದ್ದ ಇತರ ಬಸ್‌ಗಳಿಗೂ ಸ್ಫೋಟದಿಂದ ಹಾನಿಯಾಗಿತ್ತು.
ಸಂಪೂರ್ಣವಾಗಿ ಜಖಂಗೊಂಡ ಬಸ್ 76ನೇ ಬೆಟಾಲಿಯನ್‌ಗೆ ಸೇರಿದ್ದಾಗಿದ್ದು, ಅದರಲ್ಲಿ 40 ಯೋಧರಿದ್ದರು. ಕೇರಳದ ವಸಂತಕುಮಾರ್ 82ನೇ ಬೆಟಾಲಿಯನ್ ಯೋಧರಾಗಿದ್ದರು. ಪುಲ್ವಾಮಾದ ಕಾಕಪೋರಾ ನಿವಾಸಿ ಆದಿಲ್ ಅಹ್ಮದ್ ಈ ಆತ್ಮಾಹುತಿ ದಾಳಿ ನಡೆಸಿದ್ದ
ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಸೇನೆ (IAF) ಫೆಬ್ರವರಿ 26, 2019 ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ನೂರಾರು ಉಗ್ರರನ್ನು ಹತ್ಯೆ ಮಾಡಲಾಯಿತು.